

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಭಾನುವಾರ ಸಂಜೆ ಮುಳ್ಳೂರು ಗ್ರಾಮದ ಹೆಬ್ಬಾಲಿಗೆ ಆಗಮಿಸಿದ ಕುರುಬನಕಟ್ಟೆಯ ಸಿದ್ದಪ್ಪಾಜಿ ಕಂಡಾಯಗಳನ್ನು ಗ್ರಾಮದ ಯಜಮಾನರು ಹಾಗೂ ಮುಖಂಡರು ಶ್ರದ್ಧಾಭಕ್ತಿಯಿಂದ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಕಂಡಾಯಗಳನ್ನು ತಂದು ಗ್ರಾಮದ ಅಂಬೇಡ್ಕರ್ ಸಮುದಾಯದ ಭವನದ ಮುಂಭಾಗ ನಿರ್ಮಿಸಿದ್ದ ಚಪ್ಪರದೊಳಗೆ ಇರಿಸಲಾಗಿತ್ತು.ರಾತ್ರಿ 9ಕ್ಕೆ ಕಂಡಾಯಗಳ ಸಮ್ಮು ಖದಲ್ಲಿ ನೀಲಗಾರರ ಸಾಂಪ್ರದಾಯದಂತೆ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಸೋಮವಾರ ಬೆಳಗಿನ ಜಾವ 4 ಕ್ಕೆ ಕಂಡಾಯಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ನಂತರ ಮೆರವಣಿಗೆ ಮೂಲಕ ಗ್ರಾಮ ದೊಳಗೆ ಕಂಡಾಯಗಳನ್ನು ಹೊತ್ತು ತಂದ ನೀಲಗಾರರು ಕೊಂಡವನ್ನು 3 ಬಾರಿ ಪ್ರದಕ್ಷಿಣೆ ಹಾಕಿದರು. ಸಾವಿರಾರು ಜನರ ಹರ್ಷೋದ್ಗಾರ ನಡುವೆ ನೀಲಗಾರರು ಕೊಂಡ ಹಾಯ್ದರು. ಯಜಮಾನರಾದ ಬಸವಣ್ಣ, ನಿಂಗಯ್ಯ, ವಿಷಕಂಠ ಮೂರ್ತಿ, ಪುಟ್ಟಮಾದ, ರಂಗಸ್ವಾಮಿ ಮತ್ತಿತರಿದ್ದರು. ಕೊಂಡೋತ್ಸವ ಹಿನ್ನೆಲೆಯಲ್ಲಿ ಗ್ರಾಮದ ಬೀದಿಗಳಿಗೆ ದೀಪಾಲಂಕಾರ ಮಾಡಲಾಗಿತ್ತು.