

ಹಲಗೂರು: ಕಾವೇರಿ ವನ್ಯಜೀವಿ ವಲಯ ಅರಣ್ಯ ಪ್ರದೇಶದಲ್ಲಿ ಮುಳ್ಳು ಹಂದಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಹಲಗೂರು ಸಮೀಪದ ಓದುಬಸಪ್ಪನದೊಡ್ಡಿ ಗ್ರಾಮದ ನಂದೀಶ್, ಕಿರುಗಾವಲು ಹೋಬಳಿ ದೇವಿಪುರ ಗ್ರಾಮದ ಮಧು ಬಂಧಿತ ಆರೋಪಿಗಳು. ಬುಯ್ಯನದೊಡ್ಡಿ ಗ್ರಾಮದ ಅಭಿಷೇಕ್, ಹೊಸದೊಡ್ಡಿ ಗ್ರಾಮದ ಸಿದ್ದರಾಜು ಪರಾರಿಯಾಗಿದ್ದಾರೆ.
ಫೆ.13ರಂದು ಗುರುವಾರ ರಾತ್ರಿ 11.30 ರಲ್ಲಿ ಧನಗೂರು ಗಸ್ತಿನ ಗಸ್ತು ಅರಣ್ಯ ಪಾಲಕರು ದಬ್ಬಹಳ್ಳಿ ಅರಣ್ಯ ಪ್ರದೇಶದ ಡಿ-ಲೈನ್ ಗಡಿಯ ಬಳಿ ಆನೆ ಕಾವಲು ನಡೆಸುತ್ತಿರುವ ಸಂದರ್ಭದಲ್ಲಿ ಶಿಂಷಾ ಕಡೆಯಿಂದ ದಬ್ಬಹಳ್ಳಿ ಕಡೆಗೆ ಮೋಟಾರ್ ಬೈಕ್‌ನಲ್ಲಿ ಬಂದ ನಾಲ್ಕು ಆಸಾಮಿಗಳು ಅರಣ್ಯ ಇಲಾಖೆ ಸಿಬ್ಬಂದಿ ನೋಡಿ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಸಿಬ್ಬಂದಿ ಪುನೀತ್ ಮತ್ತು ಮಲ್ಲಿಕಾರ್ಜುನ ಕುಂಬಾರ ಬೆನ್ನತ್ತಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಭಿಷೇಕ್ ಮತ್ತು ಸಿದ್ದರಾಜು ಕತ್ತಲಿನಲ್ಲಿ ಓಡಿ ಹೋಗಿದ್ದಾರೆ.
ಅವರ ಬಳಿ ಇದ್ದ ಚೀಲವನ್ನು ತೆರೆದು ನೋಡಿದಾಗ ಮುಳ್ಳುಹಂದಿ ಮೃತದೇಹ ಪತ್ತೆಯಾಗಿದೆ. ಬಂಧಿತ ಆರೋಪಿಗಳಿಂದ ಬೈಕ್, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ಎಂ.ಸಿ.ಸುರೇಂದ್ರ, ಸಹಾಯಕ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ನಾಗೇಂದ್ರಪ್ರಸಾದ್, ಹಲಗೂರು ವಲಯ ಅರಣ್ಯ ಅಧಿಕಾರಿ ಪ್ರಮೋದ್‌ಕುಮಾರ್ ದೇವ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ್ದು, ಶಿಂಷಾ ಉಪವಲಯ ಅರಣ್ಯ ಅಧಿಕಾರಿ ಸಾಜು ಫ್ರಾನ್ಸಿಸ್, ಮೋಹನ್‌ಕುಮಾರ್, ಗಸ್ತು ಅರಣ್ಯ ಪಾಲಕ ಪುನೀತ್, ಮಲ್ಲಿಕಾರ್ಜುನ ಕುಂಬಾರ, ಸಿದ್ದರಾಮ ಪೂಜಾರಿ, ಸಿಬ್ಬಂದಿ ಪ್ರದೀಪ್, ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.