

ಶಹಾಬಾದ್: ದಾರಿಯುದ್ದಕ್ಕೂ ಬೆಳೆದಿರುವ ಮುಳ್ಳು-ಕಂಟಿ, ವಿವಿಧ ಸಸ್ಯಗಳು.. ಆತಂಕದಲ್ಲೇ ಹೆಜ್ಜೆ ಹಾಕಿ ಮುಂದೆ ಸಾಗುವ ಮಕ್ಕಳು.. ಇದು ಕಡೆಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆಯ ದುಸ್ಥಿತಿ.
ಹೊನಗುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೆಹಳ್ಳಿ ಗ್ರಾಮದ ಹೊರ ವಲಯದ ಹಳ್ಳದ ಸಮೀಪ ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ನಿತ್ಯವೂ ಸಾಕಷ್ಟು ಮಕ್ಕಳು ವಿದ್ಯಾರ್ಜನೆಗೆ ಬರುತ್ತಾರೆ. ಶಾಲೆಗೆ ಹೋಗಲು ಎರಡು ದಾರಿಗಳಿದ್ದು, ಮುಖ್ಯ ರಸ್ತೆ ಸರಿಯಾಗಿದ್ದು, ಯಾವುದೇ ಸಮಸ್ಯೆಯಿಲ್ಲ. ಆದರೆ ನೀರಿನ ಟ್ಯಾಂಕ್ ಬಡಾವಣೆಯ ಮಕ್ಕಳು ಶಾಲೆಯತ್ತ ಹೆಜ್ಜೆ ಹಾಕಲು ಯಾತನೆ ಅನುಭವಿಸುವಂತಾಗಿದೆ.
ನೀರಿನ ಟ್ಯಾಂಕ್ ಪ್ರದೇಶದಿಂದ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಬರುತ್ತಾರೆ. ಇವರು ಬರುವ ರೂಟ್‌ನಲ್ಲಿ ವಿಪರೀತ ಮುಳ್ಳು-ಕಂಟಿ ಬೆಳೆದಿದ್ದು, ನಡೆಯಲು ಸ್ಥಳವಿಲ್ಲದಂತಾಗಿದೆ. ವಿಷಜಂತುಗಳ ಆತಂಕದಲ್ಲಿಯೇ ನಿತ್ಯ ಶಾಲೆಯತ್ತ ನಡೆಯುವ ಸ್ಥಿತಿ ಇದೆ. ಪ್ರತಿ ಬಾರಿಯೂ ಸ್ಥಳೀಯ ಆಡಳಿತ ಈ ರಸ್ತೆಯಲ್ಲಿನ ಮುಳ್ಳು-ಕಂಟಿ ತೆರವು ಮಾಡುತ್ತಿತ್ತು. ಆದರೆ ಈ ಬಾರಿ ಸಾಕಷ್ಟು ಬಾರಿ ಮೌಖಿಕ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲ.
ಈಗಲಾದರೂ ಸಂಬAಧಪಟ್ಟವರು ಇತ್ತ ಗಮನಹರಿಸಬೇಕು. ಮಕ್ಕಳು ಶಾಲೆಗೆ ತೆರಳುವ ಮಾರ್ಗದಲ್ಲಿನ ಮುಳ್ಳು-ಕಂಟಿ ತೆರವುಗೊಳಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಪಿಡಿಒ ಮೊಬೈಲ್ ಸ್ವೀಚ್ ಆಫ್: ಕಡೆಹಳ್ಳಿ ಗ್ರಾಮದ ನೀರಿನ ಟ್ಯಾಂಕ್ ಬಡಾವಣೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆ ಸ್ವಚ್ಛತೆ ಕುರಿತು ಮಾಹಿತಿ ಪಡೆಯಲು ವಿಜಯವಾಣಿ ಪ್ರತಿನಿಧಿ ಹೊನಗುಂಟಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾದೇವ ದ್ಯಾಮಾ ಅವರಿಗೆ ಕರೆ ಮಾಡಿದರೆ ಫೋನ್ ಸ್ವೀಚ್ ಆಫ್ ಆಗಿತ್ತು.