

ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು
ಮಳೆಗಾಲ ಆಗಮಿಸುತ್ತಿದ್ದಂತೆ ಮಲೆನಾಡು ಅಕ್ಷರಶಹ ಸ್ವರ್ಗವಾಗಿರುತ್ತದೆ. ಅದರಲ್ಲಿಯೂ ಚಂದ್ರದ್ರೋಣ ಪರ್ವತ ಶ್ರೇಣಿ ಸೌಂದರ್ಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಅತಿಹೆಚ್ಚಿನ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಹೀಗಾಗಿಯೇ ಮುಂಗಾರು ಆರಂಭಗೊಳ್ಳುತ್ತಿದ್ದಂತೆ ಚಂದ್ರದ್ರೋಣ ಪರ್ವತ ಶ್ರೇಣಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ 10ಪಟ್ಟು ಹೆಚ್ಚಾಗುತ್ತದೆ. ಅದರಲ್ಲೂ ವಾರಾಂತ್ಯದ ಅಲ್ಲಂತೂ ಗಿರಿಶ್ರೇಣಿಯಲ್ಲಿ ಪ್ರವಾಸಿಗರ ನೂಕು ನುಗ್ಗಲೇ ಉಂಟಾಗಿರುತ್ತದೆ.
ಹೌದು. ಈ ವರ್ಷವೂ ಚಂದ್ರದ್ರೋಣ ಪರ್ವತ ಶ್ರೇಣಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಅತಿ ಹೆಚ್ಚಾಗಿದೆ. ಹೀಗಾಗಿಯೇ ಭಾನುವಾರ ಏಕಾಏಕಿ ಗಿರಿ ಶ್ರೇಣಿಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ನೂರಾರು ವಾಹನಗಳು ್ರಾಫಿಕ್ ಜಾಮ್‌ನಲ್ಲಿ ಸಿಲುಕುವಂತಾಗಿತ್ತು.
ಗಿರಿ ತಪ್ಪಲಿನ ಪ್ರದೇಶವಾದ ಕೈಮರ ಚೆಕ್ಪೋಸ್ಟ್ ಬಳಿಯಿಂದಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇನ್ನು ಮುಳ್ಳಯ್ಯನಗಿರಿ ಮೇಲ್ಭಾಗದಲ್ಲಿಯೂ ನೂರಾರು ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದಾಗಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಪೊಲೀಸರು ಹರ ಸಾಹಸ ಪಡುವಂತಾಯಿತು.
ಸ್ಥಳೀಯರಿಗೆ ತೊಂದರೆ
ವಾರಾಂತ್ಯದಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿಗೆ ಸಾವಿರಾರು ಸಂಖ್ಯೆಯ ವಾಹನಗಳಲ್ಲಿ ಪ್ರವಾಸಿಗರು ಬರುವುದರಿಂದಾಗಿ ಟ್ರಾಫಿಕ್ ಜಾಮ್ ಸಾಮಾನ್ಯ ಎನ್ನುವಂತಾಗಿದೆ. ಇದರಿಂದಾಗಿ ಗಿರಿ ಶ್ರೇಣಿಯಲ್ಲಿರುವ ಗ್ರಾಮಗಳ ಜನ ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ.
ವಾರಂತ್ಯದಲ್ಲಿ ಗಿರೀಶ್ ಶ್ರೇಣಿಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವುದರಿಂದಾಗಿ ಇಲ್ಲಿನ ಸ್ಥಳೀಯರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ತೆರಳುವುದು ಸೇರಿದಂತೆ ಚಿಕ್ಕಮಗಳೂರು ನಗರಕ್ಕೆ ಬರಲು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ.
ಜೀವ ವೈವಿಧ್ಯತೆಗೂ ಧಕ್ಕೆ
ಅತಿ ಸೂಕ್ಷ್ಮ ಪರಿಸರ ಹೊಂದಿರುವ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಅಳಿವಿನಂಚಿನಲ್ಲಿರುವ ಸಾಕಷ್ಟು ಜೀವರಾಶಿಗಳಿವೆ. ಇಂಥ ಸೂಕ್ಷ್ಮ ಪ್ರದೇಶದಲ್ಲಿ ಏಕಾಏಕಿ ಸಾವಿರಾರು ವಾಹನಗಳ ಸಂಚಾರದಿಂದಾಗಿ ಇಲ್ಲಿನ ಜೀವ ವೈವಿಧ್ಯತೆಗೆ ಧಕ್ಕೆಯಾಗುತ್ತಿದೆ.
ವನ್ಯಜೀವಿಗಳ ಸ್ವಚ್ಛಂದ ಓಡಾಟಕ್ಕೂ ಸಮಸ್ಯೆ ಎದುರಾಗಿದೆ. ಅಲ್ಲದೆ ಸಾವಿರಾರು ವಾಹನಗಳ ಹಾರನ್ ನಿಂದ ಶಬ್ದ ಮಾಲಿನ್ಯ ಹಾಗೂ ವಾಹನಗಳ ಹೊಗೆಯಿಂದಲೂ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂಬುದು ಪರಿಸರವಾದಿಗಳ ಆಗ್ರಹವಾಗಿದೆ.
ಪ್ರವಾಸಿ ವಾಹನಗಳನ್ನು ನಿಷೇಧಿಸಿ
ಚಂದ್ರದ್ರೋಣ ಪರ್ವತ ಶ್ರೇಣಿಗೆ ಪ್ರವಾಸಿ ವಾಹನಗಳನ್ನು ನಿಷೇಧಿಸಬೇಕು. ಪ್ರವಾಸಿ ವಾಹನಗಳ ಬದಲಿಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದಲೇ ವಾಹನಗಳ ವ್ಯವಸ್ಥೆ ಮಾಡಬೇಕು. ಆಗ ಗಿರಿ ಶ್ರೇಣಿಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ.
ಗಿರಿ ಶ್ರೇಣಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಇರುವ ಕೈಮರ ಚೆಕ್ ಪೋಸ್ಟ್ ಗಿಂತಲೂ ಹಿಂದೆಯೇ ಪ್ರವಾಸಿಗರ ವಾಹನಗಳ ಪಾರ್ಕಿಂಗ್ಗೆ ಜಾಗದ ವ್ಯವಸ್ಥೆ ಮಾಡಬೇಕು. ಅಲ್ಲಿಂದ ಪ್ರವಾಸಿಗರನ್ನು ಸರ್ಕಾರದಿಂದಲೇ ಕಲ್ಪಿಸಲಾಗುವ ಮಿನಿ ಬಸ್ ಅಥವಾ ಸಫಾರಿ ವಾಹನಗಳಲ್ಲಿ ಗಿರಿ ಶ್ರೇಣಿಗೆ ಕರೆದೊಯ್ಯಬೇಕು. ಇದರಿಂದ ಗಿರಿ ಶ್ರೇಣಿಯಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ಜೊತೆಗೆ ಪ್ರವಾಸಿಗರಿಗೂ ಉತ್ತಮ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ. ಪರಿಸರದ ಮೇಲಿನ ಒತ್ತಡವು ತಗ್ಗುತ್ತದೆ ಎನ್ನುವುದು ಪರಿಸರಾಸಕ್ತರ ಅಭಿಪ್ರಾಯವಾಗಿದೆ.
ಚಾರ್ಮಾಡಿಯಲ್ಲಿ ಕಾಣದ ದಾರಿ
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ದಟ್ಟವಾಗಿ ಮಂಜು ಕವಿದ ಕಾರಣದಿಂದಾಗಿ ಎದುರು ಬರುವ ವಾಹನಗಳು ಕಾಣದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರವಾಸಿಗರು ಹಾಗೂ ವಾಹನ ಚಾಲಕರು ಅತಿ ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕಾಗಿದೆ.
ನಾಲ್ಕೈದು ಅಡಿ ದೂರದವರೆಗೂ ಕಾಣದಂತೆ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚಾರ ನಡೆಸುವ ವಾಹನ ಚಾಲಕರು ತಮ್ಮ ವಾಹನಗಳ ಹೆಡ್ಲೈಟ್ ಹಾಕಿಕೊಂಡು ಹಾಗೂ ಹಾರನ್ ಮಾಡಿಕೊಂಡು ಸಂಚಾರ ಮಾಡಬೇಕು. ರಾತ್ರಿ ವೇಳೆ ಸಂಚಾರ ಮಾಡುವಾಗ ಇನ್ನಷ್ಟು ಜಾಗ್ರತೆ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಹೆಗಚಿ ವೇದ ನದಿಗಳು ಸೇರಿದಂತೆ ಹಲವು ಸಣ್ಣಪುಟ್ಟ ಜಲ ಮೂಲಗಳು ಉಗಮವಾಗುತ್ತವೆ. ಜೊತೆಗೆ ಅಪರೂಪದ ಜೀವಸಂಕುಲ ಈ ಭಾಗದಲ್ಲಿದೆ. ಹೀಗಾಗಿ ಇಂಥ ಸೂಕ್ಷ್ಮ ಪ್ರದೇಶಕ್ಕೆ ಹೆಚ್ಚಿನ ವಾಹನಗಳ ಪ್ರವೇಶ ನಿರ್ಬಂಧಿಸಬೇಕು. ಪ್ರವಾಸಿ ವಾಹನಗಳ ಬದಲಿಗೆ ಸರ್ಕಾರದಿಂದಲೇ ವಾಹನ ವ್ಯವಸ್ಥೆ ಮಾಡಿದಾಗ ಗಿರಿ ಶ್ರೇಣಿಯಲ್ಲಿ ವಾಹನ ದಟ್ಟಣೆ ನಿವಾರಿಸಿ ಮಾಡಿ ಅಲ್ಲಿನ ಒತ್ತಡ ಕಡಿಮೆ ಮಾಡಬಹುದಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಗಮನಹರಿಸಬೇಕು.
ವೀರೇಶ್, ಪರಿಸರಾಸಕ್ತ