

ರಾಧಾಕೃಷ್ಣ ಕಾರ್ಗಲ್ ನಾಡಿಗೆ ಬೆಳಕು ನೀಡುವಲ್ಲಿ ಶರಾವತಿ ಕಣಿವೆ ತನ್ನದೇ ಆದ ಕೊಡುಗೆ ನೀಡಿದೆ. ವಿಶೇಷವಾಗಿ ವಿದ್ಯುತ್ ಉತ್ಪಾದನೆಗಾಗಿಯೇ ನಿರ್ಮಾಣಗೊಂಡ ಹಿರೇಭಾಸ್ಕರ ಡ್ಯಾಂ, ಲಿಂಗನಮಕ್ಕಿ ಅಣೆಕಟ್ಟು ಹಾಗೂ ತಳಕಳಲೆ ರಿಸರ್ವ್ ಡ್ಯಾಂ ನಿರ್ಮಾಣದ ಬಹಳ ವರ್ಷಗಳ ನಂತರ ಇದೀಗ ಶರಾವತಿ ಕಣಿವೆಯಲ್ಲಿ ಮತ್ತೊಂದು ವಿದ್ಯುತ್ ಉತ್ಪಾದನಾ ಯೋಜನೆ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ಭೂಸ್ವಾೀನ ಪ್ರಕ್ರಿಯೆ ಆರಂಭ ಆಗಿರುವುದರಿಂದ ಈ ಭಾಗದ ರೈತರಿಗೆ ಮತ್ತೊಂದು ಆತಂಕ ಎದುರಾಗಿದೆ. ಸುಮಾರು 8000 ಕೋಟಿ ರೂ. ವೆಚ್ಚದಲ್ಲಿ 2 ಸಾವಿರ ಮೆಗಾವಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ನಿರ್ಮಾಣ ಕಾರ್ಯಕ್ಕೆ ಭೂಸ್ವಾೀನ ಪ್ರಕ್ರಿಯೆ ಆರಂಭವಾಗಿದೆ. ಶರಾವತಿ ವಿದ್ಯುದಾಗಾರಕ್ಕೆ (ಎಬಿ ಸೈಟ್) ಸುರಂಗ ಮಾರ್ಗದ ಮೂಲಕ ನೀರು ಹರಿಯುವ ವಡನಬೈಲು ಪ್ರದೇಶದಿಂದ ಸನಿಹದಲ್ಲಿ ತಳಕಳಲೆ ಹಿನ್ನೀರು ಕೊನೆಯಾಗುವ ಹೆನ್ನಿ ಸಮೀಪದ ಮರಾಠಿ ಕೇರಿ ಗ್ರಾಮದಲ್ಲಿಯೇ ಪಂಪ್ಡ್ ಸ್ಟೋರೇಜ್‌ನ ಹೊಸ ಯೋಜನೆ ಆರಂಭವಾಗಲಿದೆ. ಇದಕ್ಕಾಗಿ ಇಲ್ಲಿ ಎರಡು ಬೃಹತ್ ಸುರಂಗ ಮಾರ್ಗಗಳು ನಿರ್ಮಿಸಲಾಗುತ್ತದೆ. ಇದಕ್ಕಾಗಿ ಮರಾಠಿ ಕೇರಿ ಗ್ರಾಮದ ಹಾಲಿ ವಾಸವಿರುವ 15 ಕುಟುಂಬಗಳು ಜಾಗ ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲಿನ ಗುಂಡಿಬೈಲು ಮತ್ತು ಮರಾಠಿ ಕೇರಿಯಲ್ಲಿ ವಾಸವಿರುವ ಸುಮಾರು 60 ಕುಟುಂಬಗಳ ಪೈಕಿ ಬಹುಪಾಲು ಎಲ್ಲರೂ ಮರಾಠಿ ಸಮುದಾಯದ ಕುಣಬಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಇವರೆಲ್ಲರೂ ಶರಾವತಿ ಯೋಜನೆಯ ತಳಕಳಲೆ ಡ್ಯಾಂ ನಿರ್ಮಾಣದಿಂದ ಮುಳುಗಡೆ ಸಂತ್ರಸ್ತರಾಗಿ ಮೇಲಿನ ದಡಕ್ಕೆ ಬಂದು ಒಮ್ಮೆ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದೀಗ ಪಂಪ್ಡ್ ಸ್ಟೋರೇಜ್ ಯೋಜನೆಗೆ ಮತ್ತೊಮ್ಮೆ ಜಾಗ ಬಿಟ್ಟುಕೊಡುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
15 ಕುಟುಂಬಗಳಿಗೆ ನೋಟಿಸ್ ಈಗಾಗಲೇ ಜಾಗ ತೆರವು ಮಾಡಲು 15 ಕುಟುಂಬಗಳಿಗೆ ನೋಟಿಸ್ ನೀಡಲಾಗಿದೆ. ಇದು ಜೋಗ-ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಮನೆಗಳಿಗೆ ಹಕ್ಕುಪತ್ರವನ್ನೂ ಹೊಂದಿದ್ದಾರೆ. ಜತೆಗೆ ಹೊಲ, ಗದ್ದೆ, ತೋಟಗಳಿಗೆ ಕೆಲವರ ಬಳಿ ಖಾತೆ ಇದೆ. ಆದರೆ ಹೆಚ್ಚಿನ ಪಾಲು ಬಗರ್‌ಹುಕುಂ ಸಾಗುವಳಿ ಭೂಮಿಯಾಗಿದ್ದು, ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಖಾತೆ ಹೊಂದಿರುವ ಜಾಗ 8 ಎಕರೆ 32ಗುಂಟೆ ಮಾತ್ರ. ಸರ್ಕಾರ ಇದಕ್ಕೂ ನೋಟಿಸ್ ನೀಡಿದೆ. ಈ ಬೆಳವಣಿಗೆಗೆ ಪೂರಕವಾಗಿ ಉಪ ವಿಭಾಗಾಕಾರಿ ಮೂರು ಬಾರಿ ಗ್ರಾಮಸ್ಥರ ಸಭೆಗಳನ್ನು ನಡೆಸಿದ್ದಾರೆ. ಭೂದಾಖಲೆಗಳನ್ನು ಸಲ್ಲಿಸುವಂತೆ ಹಾಗೂ ಸಂತ್ರಸ್ತರ ಬೇಡಿಕೆಗಳನ್ನು ಆಲಿಸಲಾಗಿದೆ. ಇತ್ತೀಚೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತು ಡಿಸಿ ಗುರುದತ್ತ ಹೆಗಡೆ ಅವರು ಗ್ರಾಮಸ್ಥರ ಸಭೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಅಭಯ ನೀಡಿದ್ದಾರೆ. ಇಲ್ಲಿನ ನಿವಾಸಿಗಳು ಮನೆ, ಹೊಲ, ಗದ್ದೆ, ತೋಟ ಕಟ್ಟಿಕೊಂಡು ಜಾನುವಾರುಗಳನ್ನು ಸಾಕಣೆ ಮಾಡಿದ್ದಾರೆ. ಪ್ರಮುಖವಾಗಿ ಭತ್ತ, ಅಡಕೆ, ಗೇರು, ಮಾವು, ಕಾಳುಮೆಣಸು, ಏಲಕ್ಕಿ, ವೆನಿಲ್ಲಾ, ತೆಂಗು ಬೆಳೆಗಳನ್ನು ಬೆಳೆದಿದ್ದಾರೆ. ಇದೀಗ ತೆರವಿನ ಆತಂಕಕ್ಕೆ ಸಿಲುಕಿದ್ದಾರೆ. ಆತಂಕದಲ್ಲಿರುವ ಮರಾಠಿ ಕೇರಿ ಕುಟುಂಬಗಳು ಮಂಜುನಾಥ, ಚಂದು, ಸಂತೋಷ್, ಗೋವಿಂದ, ಹರಿನಾರಾಯಣ, ತಿಮ್ಮಯ್ಯ, ಶ್ರೀಧರ, ರಾಮ, ಗಣಪತಿ, ಲಕ್ಷ್ಮಣ, ಜಿ.ಜಿ.ರಾಜು, ಮಂಜಯ್ಯ. ತಳಕಳಲೆ ಯೋಜನೆ ಸಂದರ್ಭ ಮುಳುಗಡೆಗೊಂಡು ಹಿಂದೆ ಅಪ್ಪ, ತಾತನ ಕಾಲದಲ್ಲಿ ಪುನರ್ವಸತಿಯಿಂದ ಇಲ್ಲಿಗೆ ಬಂದು ನೆಲೆನಿಂತವರು ನಾವು. ಇದೀಗ ಮತ್ತೆ ನಮಗೆ ಜಾಗ ಖಾಲಿ ಮಾಡುವ ಭೀತಿ ಎದುರಾಗಿದೆ. ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬೇರೆಡೆ ಬದುಕು ಕಟ್ಟಿಕೊಳ್ಳಲು ಸೂಕ್ತ ಜಾಗ ಕಲ್ಪಿಸಬೇಕು. ಕುಟುಂಬದಲ್ಲಿನ ಒಬ್ಬರಿಗೆ ಉದ್ಯೋಗ ಒದಗಿಸಬೇಕು. ಬಗರ್‌ಹುಕುಂ ಮತ್ತು ಖಾತೆ ಜಾಗದಲ್ಲಿ ಬೆಳೆದ ಬೆಳೆಗಳಿಗೆ ವೌಲ್ಯಾನುಸಾರ ಪರಿಹಾರ ಕಲ್ಪಿಸಬೇಕು. ಮಂಜುನಾಥ ಮರಾಠಿ, ನಿವಾಸಿ ನಮಗೆ ನ್ಯಾಯ ದೊರಕಬೇಕು. ನಾವು ಈಗಾಗಲೇ ಸರ್ಕಾರದ ಮಟ್ಟದಲ್ಲಿ ನಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಮೇಲೆ ವಿಶ್ವಾಸ ಇರಿಸಿದ್ದೇವೆ. ಸಂತೋಷ್ ಮರಾಠಿ, ನಿವಾಸಿ