

ವಿಜಯಪುರ: ಮುಳವಾಡ ಏತನೀರಾವರಿ ಯೋಜನೆ ಡಾ.ಎಂ.ಬಿ. ಪಾಟೀಲರ ಕನಸಿನ ಕೂಸು. ಅವರು ನೀರಾವರಿ ಮಂತ್ರಿಯಾಗಿದ್ದಾಗ ಜಾರಿಗೆ ತಂದ ಯೋಜನೆ. ಇದರಲ್ಲಿ ಡಿಸಿಎಂ ಗೋವಿಂದ ಕಾರಜೋಳರ ಸಾಧನೆ ಶೂನ್ಯ ಎಂದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ವಿಠಲ ಕಟಕಧೋಂಡ ತಿಳಿಸಿದ್ದಾರೆ.
ಮಾಜಿ ಸಚಿವ ಡಾ.ಎಂ.ಬಿ.ಪಾಟೀಲರು ಮಾಡಿದ ಯೋಜನೆಗಳಿಗೆ ಗೋವಿಂದ ಕಾರಜೋಳ ಇದೀಗ ಭೂಮಿ ಪೂಜೆ ನೆರವೇರಿಸುತ್ತಿದ್ದಾರೆ. ಮುಳವಾಡ ಏತನೀರಾವರಿ ಯೋಜನೆಯಿಂದ ಕೃಷ್ಣಾ ನದಿಯ ನೀರನ್ನು ಭೀಮಾನದಿ ಭಾಗಕ್ಕೆ ಕೊಂಡೊಯ್ಯಬೇಕೆಂಬುದು ಎಂ.ಬಿ. ಪಾಟೀಲರ ಕನಸಾಗಿತ್ತು. ಅದಕ್ಕಾಗಿ ಮದಭಾವಿ ಹತ್ತಿರ ತಿಡಗುಂದಿ ವಿಸ್ತರಣಾ ಕಾಲುವೆ ಆರಂಭಿಸಿ 00-66ಕಿಮೀ ವರೆಗೆ ಯೋಜನೆ ರೂಪಿಸಿ ಅನುದಾನ ನೀಡಿ, ಕಾಮಗಾರಿ ಪ್ರಾರಂಭಿಸಿದರು. ಆರಂಭದಲ್ಲಿಯೇ ಬೃಹತ್ ತಿಡಗುಂದಿ ಅಕ್ವಾಡೆಕ್ಟ್ ನಿರ್ಮಿಸಲು ತಾಂತ್ರಿಕ ತೊಂದರೆ ಎದುರಾದಾಗ, ಯೋಜನೆ ನಿಂತು ಹೋಗುವ ಸಂಭವವಿತ್ತು. ಆಗ ಎಂ.ಬಿ.ಪಾಟೀಲರು ಕೃಷ್ಣಾ ನದಿಯ ನೀರನ್ನು ತೀವ್ರ ನೀರಿನ ಕೊರತೆಯಿಂದ ಬಳಲುತ್ತಿರುವ ಇಂಡಿ ತಾಲೂಕಿಗೆ ನೀಡಲೇಬೇಕು ಎಂಬ ಸಂಕಲ್ಪದೊಂದಿಗೆ ದೇಶ ವಿದೇಶಗಳ ತಂತ್ರಜ್ಞರನ್ನು ಕರೆಯಿಸಿ ಸಮಾಲೋಚನೆ ಮಾಡಿ, ತಿಡಗುಂದಿ ಬಳಿ 16ಕಿಮೀ ಬೃಹತ್ ಅಕ್ವಾಡೆಕ್ಟ್ ನಿರ್ಮಿಸಿ ಒಂದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸಿದ್ದಾರೆ ಎಂದು ಕಟಕಧೋಂಡ ತಿಳಿಸಿದ್ದಾರೆ.
ಮುಳವಾಡ ಏತ ನೀರಾವರಿಯ 0-56ಕಿಮೀ ವರೆಗೆ ಎಂ.ಬಿ.ಪಾಟೀಲರೇ ಕಾಮಗಾರಿ ಪೂರ್ಣಗೊಳಿಸಿದ್ದಾರೆ. 56-66ಕಿಮೀ ಕಾಲುವೆಯಲ್ಲಿ ಈ ಕೊನೆಯ 10ಕಿಮೀ ಕಾಲುವೆಯನ್ನು ಓಪನ್ ಕಾಲುವೆ ಮಾಡದೇ ಪೈಪ್‌ಲೈನ್ ಮೂಲಕ ರೂಪಿಸಿ, ಉಳಿತಾಯವಾಗುವ ನೀರನ್ನು ಇಂಡಿ ಭಾಗದ 18ಕೆರೆಗಳಿಗೆ ಹರಿಸಲು ವಿಶೇಷ ಯೋಜನೆ ರೂಪಿಸಿದ ಕೀರ್ತಿ ಎಂ.ಬಿ.ಪಾಟೀಲರಿಗೆ ಸಲ್ಲುತ್ತದೆ. ಇಷ್ಟೆಲ್ಲ ಕೆಲಸ ಮಾಡಿದರೂ ಗೋವಿಂದ ಕಾರಜೋಳ ಅವರು ಅಥರ್ಗಾದಲ್ಲಿ ಕೆರೆ ತುಂಬುವ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸುವ ವೇಳೆ ಅವರ ಹೆಸರು ಪ್ರಸ್ತಾಪಿಸದಿರುವುದು ನಾಚಿಕೆಗೇಡು ಎಂದ ಕಟಕಧೋಂಡ ಎಂ.ಬಿ. ಪಾಟೀಲರ ಹೆಸರು ಕಾರಜೋಳ ಪ್ರಸ್ತಾಪಿಸಿದ್ದರೂ ಅನೇಕ ಜಲಚರಗಳು, ಪಶು-ಪಕ್ಷಿಗಳು ಅವರ ಹೆಸರನ್ನು ಹೇಳುತ್ತವೆ ಎಂದು ಪ್ರಕಟಣೆ ಮೂಲಕ ಟಾಂಗ್ ನೀಡಿದ್ದಾರೆ.