ಮುಳಬಾಗಿಲು ಗಡಿಭಾಗದಲ್ಲಿ ಗುಂಡಿನ ಸದ್ದು

Published on

ಮುಳಬಾಗಿಲು

ಬೆಂಗಳೂರು, ಕಲಬುರಗಿ, ಭೀಮಾತೀರದಲ್ಲಿ ಕೇಳಿ ಬರುತ್ತಿದ್ದ ಗನ್​ ಸದ್ದು ಇದೀಗ ಮುಳಬಾಗಿಲಿನ ಗಡಿಭಾಗದಲ್ಲೂ ಕೇಳಿಸಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ತಾಲೂಕಿನ ಆಂಧ್ರ ಗಡಿಭಾಗಕ್ಕೆ ಹೊಂದಿ ಕೊಂಡಿರುವ ಉಪ್ಪರಹಳ್ಳಿಯ ತೋಟದ ಮನೆಯಲ್ಲಿದ್ದ ನಾಗರಾಜ್​(40) ಎಂಬುವವರು ಮಂಗಳವಾರ ರಾತ್ರಿ 8.20 ಸುಮಾರಿಗೆ ಮನೆಯ ಕಿಟಕಿ ಬಳಿ ಮಧ್ಯಪಾನ ಮಾಡುತ್ತಿದ್ದ ವೇಳೆ ಹಂತಕರ ಗುಂಪೊಂದು ಕಾಂಪೌಂಡ್​ನ ಚಪ್ಪಡಿ ಕಲ್ಲಿನ ಸಂಧಿಯಿಂದ ಗುಂಡು ಹಾರಿಸಿ ಕೊಲೆಗೆ ಯತ್ನ ನಡೆಸಿದೆ. ಗುಂಡು ಕಿಟಕಿ ಕಂಬಿಗೆ ತಾಗಿ ಪಕ್ಕಕ್ಕೆ ಬಿದ್ದಿದ್ದರಿಂದ ನಾಗರಾಜ್​ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಬೆಂಗಳೂರು ಸೇರಿ ವಿವಿಧ ಠಾಣೆಗಳಲ್ಲಿ ಚೆಂಬು, ರೈಸ್​ಪುಲ್ಲಿಂಗ್​, ಮೆಡಿಕಲ್​ ಸೀಟ್​ ವಂಚನೆಯಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಪೊಲೀಸರಿಂದ ಬಂಧನಕ್ಕೊಳಗಾದ್ದ ನಾಗರಾಜ್​ ಕೆಲ ದಿನಗಳ ಹಿಂದೆ ಜಾಮೀನು ಮೇಲೆ ಹೊರಬಂದು ಗ್ರಾಮದಲ್ಲಿ ವಾಸವಾಗಿದ್ದ. ಆದರೆ ಮಂಗಳವಾರ ನಡೆದ ದಾಳಿಯಿಂದ ವಿರೋಧಿಗಳು ಈತನ ಹತ್ಯೆಗೆ ಸಂಚು ರೂಪಿಸಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ.

ಗುಂಡಿನ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಎಸ್ಪಿ ಎಂ. ನಾರಾಯಣ, ಎಎಸ್ಪಿ ಪಿ.ಭಾಸ್ಕರ್​, ಕೋಲಾರ ಡಿವೈಎಸ್ಪಿ ಮುರಳಿಧರ್​, ಗ್ರಾಮಾಂತರ ಸಿಪಿಐ ಜಿ.ಲಕ್ಷ್ಮೀಕಾಂತಯ್ಯ, ನಂಗಲಿ ಠಾಣೆ ಪಿಎಸ್​ಐ ನಂದೀಶ್​ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮಹಜರು ನಡೆಸಿದ್ದಾರೆ.

ಬುಧವಾರ ಬೆಳಗ್ಗೆ ಬೆಂಗಳೂರಿನಿಂದ ಎಫ್​ಎಸ್​ಎಲ್​ ಮತ್ತು ಶ್ವಾನದಳ ಸಿಬ್ಬಂದಿ ಆಗಮಿಸಿ ವಿವಿಧ ಮಾದರಿಗಳನ್ನು ಸಂಗ್ರಹಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಅಲ್ಲದೇ ಉಪ್ಪರಹಳ್ಳಿಯ ಮಂಜುನಾಥ ಎಂಬಾತ ಕೇರಳ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ಗಡಿಭಾಗವು ಅಪರಾಧ ಚಟುವಟಿಕೆಗಳ ಅಡ್ಡವಾಗಲಿದೆ ಎಂಬ ಆತಂಕ ಸ್ಥಳಿಯರಲ್ಲಿ ಕಾಡುತ್ತಿದೆ. ಮುಳಬಾಗಿಲು ಮತ್ತು ಕೋಲಾರ ಜಿಲ್ಲಾ ಪೊಲೀಸ್​ ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣಗಳಲ್ಲಿ ಪಾಲ್ಗೊಳ್ಳದೆ ಹೊರಗಿನ ಪ್ರದೇಶಗಳಲ್ಲಿ ಅಪರಾಧಗಳಲ್ಲಿ ಸಕ್ರಿಯರಾದವರ ಬಗ್ಗೆ ಇಲಾಖೆ ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net