ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ವಿಜಯಪುರದ ಶ್ರೀ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಫೆ. 8ರಂದು ಬೆಳಗ್ಗೆ 10.30ಕ್ಕೆ ಮೊದಲ ಬಾರಿಗೆ ರಾಜ್ಯ ಮಟ್ಟದ ಮುಲ್ಲಾ ಸಮಾಜದ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಶನ್(ಕೆಎಂಎ)ನ ಧಾರವಾಡ ಜಿಲ್ಲಾಧ್ಯಕ್ಷ ಶಮೀಮ ಅಹ್ಮದ ಮುಲ್ಲಾ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಆರಂಭಗೊಂಡ ಕೆಎಂಎ ಮುಲ್ಲಾ ಸಮಾಜದ ಬಡ ಮಕ್ಕಳ ಶಿಕ್ಷಣ, ವಿಧವೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಪ್ರತಿ ಜಿಲ್ಲೆಯಲ್ಲಿ ಸಮಾವೇಶ ನಡೆಸಿದ್ದೇವೆ. ಇದೀಗ ಮೊದಲ ಬಾರಿಗೆ ರಾಜ್ಯ ಮಟ್ಟದ ಸಮಾವೇಶ ನಡೆಸುತ್ತಿದ್ದೇವೆ ಎಂದು ಹೇಳಿದರು.
2019ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಲ್ಲಾಗಳ 4500 ಎಕರೆ ಇನಾಮ್ ಜಮೀನುಗಳ ಮೇಲೆ ವಕ್ಪ್ ಬೋರ್ಡ್ ಹೆಸರು ನೋಂದಣಿ ಮಾಡಿಸಲಾಗಿತ್ತು. ವಕ್ಪ್ ಹೆಸರು ತೆಗೆಯಿಸಲು ಗದಗ, ಧಾರವಾಡ, ಕೊಪ್ಪಳ್ಳ, ವಿಜಯಪುರ ಇನ್ನು ಅನೇಕ ಜಿಲ್ಲೆಗಳಲ್ಲಿ ಹೋರಾಟ ನಡೆಸಿದ್ದೇವು. ಆದರೆ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಿದ್ದೇವೆ. ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಕಡಕೋಳ ಗ್ರಾಮದಲ್ಲಿ ವಕ್ಪ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಧ್ವಂಸಗೊಂಡ 50-60 ಮನೆಗಳಿಗೆ ಪರಿಹಾರ ನೀಡುವ ಕುರಿತು ಚರ್ಚೆ ನಡೆಯಲಿದೆ ಎಂದರು.
ಸಮಾವೇಶದಲ್ಲಿ ಸಚಿವರಾದ ಎಂ.ಬಿ. ಪಾಟೀಲ, ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ, ಸಿ.ಎಂ. ಇಬ್ರಾಹಿಂ, ಅಜಯ ಧರ್ಮಸಿಂಗ್, ಇತರರು ಪಾಲ್ಗೊಳ್ಳುವರು. ಸುದ್ದಿಗೋಷ್ಠಿಯಲ್ಲಿ ನವೀದ ಮುಲ್ಲಾ, ಎಚ್.ಎಂ. ಮುಲ್ಲಾ, ಕೆ.ಎ. ಖಾಜಿ, ಅಬ್ದುಲ್ ರಜಾಕ್ ಮುಲ್ಲಾ, ಅಬ್ದುಲ್ಲ ಅಜೀಜ್ ಮುಲ್ಲಾ ಇದ್ದರು,