

ಹಾಸನ: ಸಕಲೇಶಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರುಳಿ ಮೋಹನ್ ದಲಿತ ಅಧಿಕಾರಿಗಳ ವಿರುದ್ಧ ದಬ್ಬಾಳಿ ಮಾಡುತ್ತಿದ್ದು, ಅವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದೂರು ಸಲ್ಲಿಸಲಾಗುವುದು ಎಂದು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಒಕ್ಕೂಟದ ಮುಖಂಡ ಹೆತ್ತೂರು ದೊಡ್ಡಯ್ಯ ಅವರು ಹೇಳಿದರು.
ಸಕಲೇಶಪುರ ಕೃಷಿ ಅಧಿಕಾರಿ ಪ್ರಕಾಶ್ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಏಕವಚನದಲ್ಲಿ ನಿಂದಿಸಿರುವುದು ಮಾತ್ರವಲ್ಲದೆ ಕ್ಷೇತ್ರಕ್ಕೆ ತಾವೇ ಎಂಎಲ್‌ಎ ಎಂದು ದರ್ಪ ತೋರುತ್ತಾರೆ. ಈಗಾಗಲೇ ಅನೇಕ ಅಧಿಕಾರಿಗಳನ್ನು ತಮ್ಮ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿದ್ದಾರೆ. ಇವರ ದಬ್ಬಾಳಿಕೆಗೆ ಬೇಸತ್ತು ಅಧಿಕಾರಿಗಳು ಕೆಲಸ ಮಾಡದ ವಾತಾವರಣ ಸೃಷ್ಟಿಯಾಗಿದೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಂದರು.
ಪರಾಜಿತ ಅಭ್ಯರ್ಥಿ ಎಂಬ ಲೆಟರ್ ಹೆಡ್ ಮೂಲಕ ಶಿಫಾರಸ್ಸು ಪತ್ರಗಳನ್ನು ಬರೆಯುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ ಹಾಗು ಸಂಸದ ಡಿ.ಕೆ.ಸುರೇಶ್ ಅವರು ಆತ್ಮೀಯರಾಗಿದ್ದಾರೆ ಎಂಬ ಕಾರಣಕ್ಕೆ ಉದ್ದಟತನ ಪ್ರದರ್ಶಿಸುತ್ತಿದ್ದಾರೆ. ತಮಿಳುನಾಡು ಮೂಲದ ಮುರುಳಿ ಮೋಹನ್ ಸಕಲೇಶಪುರದಲ್ಲಿ ದರ್ಪ ಮೆರೆಯುತ್ತಿರುವುದು ಖಂಡನೀಯ. ಕಾನೂನು ಪ್ರಕಾರ ಯಾವ ಅಧಿಕಾರಿ ಕೆಲಸ ಮಾಡಿದರೂ ಅವರ ವಿರುದ್ಧ ಹಗೆತನ ಸಾಧಿಸುತ್ತಾರೆ. ಕೃಷಿ ಅಧಿಕಾರಿ ಪ್ರಕಾಶ್ ಕುಮಾರ್ ಅವರಿಗೆ ಕರೆ ಮಾಡಿ ನನಗೆ ಮಾಹಿತಿ ಇಲ್ಲದೆ ಹೇಗೆ ಬಂದಿದ್ದೀಯ ಎಂದು ಪ್ರಶ್ನಿಸುತ್ತಾರೆ. ಹೀಗಾದರೆ ಪ್ರಜಾಪ್ರಭುತ್ವ ಉಳಿಯುವುದು ಹೇಗೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನ ನಾಯಕರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಮುರುಳಿ ಮೋಹನ್ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪರಿಶಿಷ್ಟ ಜಾತಿ ಹಾಗು ವರ್ಗಗಳ ಒಕ್ಕೂಟದ ಮಂಜುನಾಥ, ಸ್ಟೀವನ್ ಪ್ರಕಾಶ್, ಗಂಗಣ್ಣ, ಕುಮಾರ್ ಇದ್ದರು.