ಮುರುಘೇಂದ್ರಶ್ರೀ ಆದರ್ಶ ಸ್ಮರಣೀಯ - ಗುರುಸಿದ್ಧ ಸ್ವಾಮೀಜಿ

10Athani3
Published on

ಅಥಣಿ: ಮುರುಘೇಂದ್ರ ಶಿವಯೋಗಿಗಳ ಕಾರ್ಯಗಳು ಸ್ಮರಣೀಯವಾಗಿದ್ದು, ನಮಗೆಲ್ಲ ಆದರ್ಶವಾಗಿವೆ ಎಂದು ಹಲ್ಯಾಳದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಇಲ್ಲಿನ ಶೆಟ್ಟರಮಠದ ಮರುಳಸಿದ್ಧ ಶಿವಯೋಗಿಗಳ 133ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಗುಡ್ಡಾಪುರದ ದಾನಮ್ಮದೇವಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಥಣಿಯ ಮೂರು ಮಠಗಳ ಶಿವಯೋಗಿಗಳು ಅಧ್ಯಾತ್ಮದ ದೀಪ ನಿರಂತರವಾಗಿ ಬೆಳಗುವಂತೆ ಮಾಡಿದ್ದಾರೆ. ಶೆಟ್ಟರಮಠದ ಕರ್ತೃ ಮರುಳಸಿದ್ಧ ಶಿವಯೋಗಿಗಳು ಮಹಾನ್ ತಪಸ್ವಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಶ್ರೀಮಠದ ಸೇವೆ ಮಾಡುವ ಭಾಗ್ಯ ದೊರೆತಿದ್ದು, ಗುರುಭವನ ನಿರ್ಮಾಣ ಕಾರ್ಯ ನಡೆದಿದೆ ಎಂದರು.

ನದಿಇಂಗಳಗಾವಿಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಗುಡ್ಡಾಪುರದ ದಾನಮ್ಮದೇವಿ ದಾಸೋಹ ಸೇವೆಗೈದು ಮಹಾಶಿವಶರಣೆ ಎನಿಸಿಕೊಂಡ ಕ್ಷೇತ್ರದಲ್ಲಿ ಪ್ರತಿದಿನ ದಾಸೋಹ ನಡೆಯುತ್ತಿರುವುದು ಹೆಮ್ಮೆ ಎಂದರು. ಪುರಸಭಾ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಹಿರಿಯರಾದ ಎ.ಎ.ಹುದ್ದಾರ, ಆನಂದ ಮಹಾಜನ, ಜಿ.ಡಿ.ಹಿರೇಮಠ, ಕೇದಾರೆಪ್ಪ ತೇರದಾಳ, ರಾಜೇಶ್ವರಿ ಹಿರೇಮಠ, ಸಂಗಪ್ಪ ಉಣ್ಣಿ, ಬಸಯ್ಯ ಹಿರೇಮಠ, ಭೀಮಪ್ಪ ಗೌರಾಣಿ, ರಘುನಾಥ ಬೊರಾಡೆ, ವಿಜಯಕುಮಾರ ಉಮರಾಣಿ, ಸದಾಶಿವ ಗೌರಾಣಿ, ರಾಜು ಆಲಬಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net