

ಅಥಣಿ: ಮಹಾತಪಸ್ವಿ ಲಿಂ.ಮುರುಘೇಂದ್ರ ಶಿವಯೋಗಿಗಳು ಪ್ರಥಮ ಬಾರಿ ಬಸವ ಜಯಂತಿ ಆಚರಿಸಿದ ಮಹಾಮಹಿಮ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಗಚ್ಚಿನಮಠದಲ್ಲಿ ಲಿಂ.ಮುರುಘೇಂದ್ರ ಶಿವಯೋಗಿಗಳ ೧೯೦ನೇ ಜಯಂತಿ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಬಸವಣ್ಣನ ವಚನಗಳಂತೆ ಬದುಕಿನುದ್ದಕ್ಕೂ ನಡೆದು ಶ್ರೀಮಠದಲ್ಲಿ ಅನ್ನದಾಸೋಹ, ಶಿಕ್ಷಣ, ಆಶ್ರಯ ನೀಡುವಂತೆ ಪ್ರೇರಣೆ ನೀಡಿದರು. ಇಂದು ಗಚ್ಚಿನಮಠ ಲಕ್ಷಾಂತರ ಭಕ್ತರನ್ನು ಹೊಂದಿದ್ದಕ್ಕೆ ಕಾರಣ ಮುರುಘೇಂದ್ರ ಶಿವಯೋಗಿಗಳ ದಿವ್ಯಶಕ್ತಿ ಕಾರಣ ಎಂದರು. ಬಸವಕಿರಣ ಸ್ವಾಮೀಜಿ ಮಾತನಾಡಿ, ಗಚ್ಚಿನಮಠ ಪವಿತ್ರ, ಜಾಗೃತ ಐತಿಹಾಸಿಕ ಸ್ಥಳ ಎಂದರು.
ಪಲ್ಲಕ್ಕಿ ಉತ್ಸವ: ಬೆಳಗ್ಗೆ ಶ್ರೀಗಳ ಕರ್ತೃ ಗದ್ದುಗೆಗೆ ವಚನಾಭಿಷೇಕ, ಮಹಾಮಂಗಳಾರತಿ ನಂತರ ಶಿವಯೋಗಿಗಳ ಭಾವಚಿತ್ರ ಮತ್ತು ವಚನ ಸಂಪುಟಗಳನ್ನಿಟ್ಟ ಪಲ್ಲಕ್ಕಿ ಉತ್ಸವವು ಸಕಲ ವಾದ್ಯವೃಂದಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಗಚ್ಚಿನಮಠದಲ್ಲಿ ಸಮಾವೇಶಗೊಂಡಿತು. ನಂತರ ಎಲ್ಲರಿಗೂ ಮಹಾಪ್ರಸಾದ ವಿತರಿಸಲಾಯಿತು.
ಗಡಹಿಂಗ್ಲಜದ ಬಸವಕಿರಣ ಸ್ವಾಮೀಜಿ, ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ತೆಲಸಂಗದ ವೀರೇಶ್ವರ ದೇವರು, ಬಸವರಾಜ ದೇವರು ಇತರರಿದ್ದರು.