

ಚಿತ್ರದುರ್ಗ: ತಾಲೂಕಿನ ಸೀಬಾರ-ಗುತ್ತಿನಾಡಿನ ಮುರುಘಾಮಠದ ಜಾಗದಲ್ಲಿ ಆಯೋಜಿಸಿರುವ 70ನೇ ದನಗಳ ಜಾತ್ರೆಗೆ ವಿವಿಧೆಡೆಯಿಂದ ರಾಸುಗಳನ್ನು ರೈತರು ಕರೆತರುತ್ತಿದ್ದಾರೆ.
ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ, ಗುರುಪಾದ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣಾರ್ಥ ಸತತ 69 ವರ್ಷದಿಂದ ಶ್ರೀಮಠ ದನಗಳ ಜಾತ್ರೆ ಆಚರಿಸುತ್ತ ಬಂದಿದೆ. ಈ ಬಾರಿ ತ್ರಿವಿಧ ದಾಸೋಹಿ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 150ನೇ ಜಯಂತಿ ಅಂಗವಾಗಿ ನಡೆಸುತ್ತಿದೆ.
ದನಗಳ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಕೃಷಿಕರು, ವ್ಯಾಪಾರಸ್ಥರು ತಮ್ಮ ರಾಸುಗಳನ್ನು ಜಾತ್ರೆಗೆ ಕರೆತರುತ್ತಿರುವ ಕಾರಣ ದಿನೇ ದಿನೆ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ ಮೂರ‌್ನಾಲ್ಕು ದಿನದೊಳಗೆ ಸಂಖ್ಯೆ ಮತ್ತಷ್ಟು ಅಧಿಕವಾಗಲಿದೆ. ಬರುವವರ, ರಾಸುಗಳ ಅನುಕೂಲಕ್ಕಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶ್ರೀಮಠ ತಿಳಿಸಿದೆ.