ಮುರುಘಾಮಠದಿಂದ 20 ಎಕರೆ ತೋಟ

Murughamatha
Published on

ಚಿತ್ರದುರ್ಗ: ಮುರುಘಾಮಠ ನಗರದ ಸುತ್ತಮುತ್ತಲಿನ 20 ಎಕರೆ ವಿಸ್ತೀರ್ಣದಲ್ಲಿ ತೋಟ ಮಾಡುವ ಇಚ್ಛೆ ಹೊಂದಿದೆ. ಅದಕ್ಕೆ ಜೂ. 5ರಂದು ಚಾಲನೆ ದೊರೆಯಲಿದೆ ಎಂದು ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.

ಮುರುಘಾಮಠ, ಎಸ್‌ಜೆಎಂ ದಂತ ಮಹಾವಿದ್ಯಾಲಯ, ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು, ಎಸ್‌ಜೆಎಂ ಕಾನೂನು ಮಹಾವಿದ್ಯಾಲಯ, ವಿವಿಧ ಸಮಾಜ, ಸಂಘ-ಸಂಸ್ಥೆಗಳಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಸ್‌ಜೆಎಂ ದಂತ ಮಹಿಳಾ ವಸತಿನಿಲಯ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ, ಸಸಿ ನೆಡುವ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರೀಮಠದಿಂದ ಸೀಬಾರ ಬಳಿ 5 ಕೊಳವೆಬಾವಿ ಕೊರೆಸಿದ್ದು, ಪ್ರತಿಯೊಂದರಲ್ಲೂ 4 ಇಂಚು ನೀರು ಬಿದ್ದಿದೆ. ಇದರಿಂದ ಗಿಡ-ಮರಗಳನ್ನು ಬೆಳೆಸಲು, ರಕ್ಷಿಸಲು ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ತೋಟದ ವ್ಯಾಪ್ತಿಯನ್ನು ವಿಸ್ತರಿಸಲು ಚಿಂತಿಸಲಾಗಿದೆ ಎಂದರು.

ಹಿಂದೆಲ್ಲ ಮುಂಚೂಣಿಯಲ್ಲಿದ್ದ ಮಹಾ ಶರಣ-ಶರಣೆಯರ ಜಯಂತಿ ಆಚರಿಸಲಾಗುತ್ತಿತ್ತು. ಕಾಲಕ್ರಮೇಣ ಆಯಾ ಸಮುದಾಯದವರು ತಮ್ಮ ದಾರ್ಶನಿಕರ ಜಯಂತ್ಯುತ್ಸವ ಮಾಡುತ್ತ ಬಂದಿದ್ದಾರೆ. ಶ್ರೀಮಠ ಎಲ್ಲ ಸಮುದಾಯಕ್ಕೂ ಲಿಂಗದೀಕ್ಷೆ ನೀಡುತ್ತ ಬಂದಿದ್ದು, ಅದರಿಂದ ಸಮಾಜದ ಪರಿವರ್ತನೆಗೆ ಕಾರಣವಾಗಿದೆ ಎಂದು ತಿಳಿಸಿದರು.

ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಮಾತನಾಡಿ, ಶ್ರೀಮಠ ರಾಜ್ಯದ ಪ್ರಮುಖ ಧಾರ್ಮಿಕ-ಸಾಂಸ್ಕೃತಿಕ ಕೇಂದ್ರಗಳಲ್ಲೊಂದು. ಹಿಂದಿನ ಅನೇಕ ಲಿಂಗೈಕ್ಯ ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವಿಸ್ಮರಣೀಯ ಎಂದರು.

ಮಹಾಶರಣೆ ಹೇಮರಡ್ಡಿ ಮಲ್ಲಮ್ಮ ಮಹಿಳೆಯರ, ಸಮಾಜದ ಉದ್ಧಾರಕ್ಕಾಗಿ ಅಂದಿನ ಕಾಲದಲ್ಲಿ ಹೋರಾಡಿರುವುದು ಇತಿಹಾಸವಾಗಿದೆ. ಅವರ ತತ್ವಾದರ್ಶ ಮೈಗೂಡಿಸಿಕೊಂಡು ದೇಶ ಮತ್ತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.

ಮುರುಘಾಮಠ ಮತ್ತು ಸಿರಿಗೆರೆ ಬೃಹನ್ಮಠ ಸಾರ್ವಜನಿಕರ ಹಿತಕ್ಕಾಗಿ ಶ್ರಮಿಸುತ್ತಿವೆ. 60 ವರ್ಷದ ಹಿಂದೆ ವನ ಮಹೋತ್ಸವ ಪ್ರಾರಂಭಿಸಿದೆವು. ಆದರೆ, ಇಂದು ಉತ್ತಮ ಪರಿಸರ ನಿರ್ಮಾಣಕ್ಕಾಗಿ ಜನರು ಗಿಡ-ಮರ ಬೆಳೆಸುವುದು ಕಡಿಮೆಯಾಗಿದೆ. ಇನ್ನಾದರೂ ಈ ಕುರಿತು ಗಮನ ಹರಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ಕೆಇಬಿ ಷಣ್ಮುಖಪ್ಪ, ಪ್ರಾಚಾರ್ಯರಾದ ಡಾ. ರಘುನಾಥರೆಡ್ಡಿ, ಡಾ.ಎಲ್. ಈಶ್ವರಪ್ಪ, ಡಾ.ಎಸ್. ದಿನೇಶ್, ಪ್ರವೀಣ್, ಹೇಮರಡ್ಡಿ ಮಲ್ಲಮ್ಮ ಸಮಾಜದ ಚಿದಾನಂದಪ್ಪ, ಪಿ. ವೀರೇಂದ್ರಕುಮಾರ್, ನಾಗರಾಜ ಸಂಗಂ, ಶಿವಾನಂದಪ್ಪ, ಶಿವಮೂರ್ತಿ, ಬಸವರಾಜ ಕಟ್ಟಿ, ಉಮೇಶ್ ಪತ್ತಾರ್, ಶೈಲಜಾ, ನವೀನ್ ಮಸ್ಕಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net