ಮುರುಘಾಮಠಕ್ಕೆ ಹೊಸ ಆಡಳಿತಾಧಿಕಾರಿ

CTD 4 MRUGA MATT NEWS ADDMNIN--02
Published on

ಚಿತ್ರದುರ್ಗ: ಮುರುಘಾಮಠದ ನೂತನ ಆಡಳಿತಾಧಿಕಾರಿಯಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಹೈಕೋರ್ಟ್ ನಿರ್ದೇಶನದ ಮೇರೆಗೆ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ತಾತ್ಕಾಲಿಕ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ ಎಂದರು. ಹಿಂದಿನ ಆಡಳಿತಾಧಿಕಾರಿ, ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರು, ನ್ಯಾಯಾಧೀಶರಿಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸುವ ಮೊದಲು ಪ್ರೇಮಾವತಿ ಅವರು ಶ್ರೀ ಮಠದ ಕರ್ತೃ ಗದ್ದುಗೆ ದರ್ಶನ ಪಡೆದರು.

ಲೈಂಗಿಕ ದೌರ್ಜನ್ಯ ಪ್ರಕರಣದಡಿ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಆಡಳಿತ ನಿರ್ವಹಣೆ ಉದ್ದೇಶದಿಂದ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿತ್ತು. ಆದರೆ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಡಳಿತಾಧಿಕಾರಿ ನೇಮಕವನ್ನು ಕಳೆದ ಮೇ 22 ರಂದು ರದ್ದುಪಡಿಸಿದ್ದ ಹೈಕೋರ್ಟ್, ಮಧ್ಯಂತರ ವ್ಯವಸ್ಥೆಗೆ ಭಕ್ತರಿಗೆ 6 ವಾರಗಳ ಕಾಲಾವಕಾಶ ನೀಡಿತ್ತು.

ಏತನ್ಮಧ್ಯೆ ಆಡಳಿತಾಧಿಕಾರಿ ನೇಮಕ ರದ್ದು ಆದೇಶವನ್ನು ಪ್ರಶ್ನಿಸಿ ಮಾಜಿ ಸಚಿವ ಎಚ್.ಏಕಾಂತಯ್ಯ ಮತ್ತಿತರರು ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಅವರನ್ನು ನೇಮಿಸಿ ಸೋಮವಾರ ಆದೇಶಿಸಿತ್ತು.

ಅಧಿಕಾರ ಸ್ವೀಕಾರದ ವೇಳೆ ಡಿ.ಎಸ್.ಮಲ್ಲಿಕಾರ್ಜುನ್, ಪ್ರಭಾಕರ್,ಪ್ರೊ.ಸಿ.ಟಿ.ಜಯಣ್ಣ, ಎಸ್‌ಎಂಎಲ್ ತಿಪ್ಪೇಸ್ವಾಮಿ, ಲಿಂಗರಾಜು, ವಕೀಲರಾದ ವಿಶ್ವನಾಥ್, ಮಧುಕುಮಾರ್ ಮತ್ತಿತರರು ಇದ್ದರು. ಅಧಿಕಾರ ಹಸ್ತಾಂತರಿಸಿದ ವಸ್ತ್ರದ್ ಅವರನ್ನು ಈ ವೇಳೆ ಗೌರವಿಸಲಾಯಿತು.

(ಸಿಟಿಡಿ 4 ಮುರುಘಾ ಮಠ ನ್ಯೂ ಅಡ್ಮಿನ್)
ಚಿತ್ರದುರ್ಗ ಮುರುಘಾಮಠದ ನೂತನ ಆಡಳಿತಾಧಿಕಾರಿಯಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ. ಮನಗೂಳಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಹಿಂದಿನ ಆಡಳಿತಾಧಿಕಾರಿ ಪಿ.ಎಸ್.ವಸ್ತ್ರದ್, ವಕೀಲ ವಿಶ್ವನಾಥ್ ಇತರರು ಇದ್ದಾರೆ.

(ಸಿಟಿಡಿ 4 ಪ್ರೇಮಾವತಿ ಎಂ.ಮನಗೂಳಿ)ಮಗ್‌ಶಾಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net