

ಪಾವಗಡ : ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲೆಂದು 2010ರಲ್ಲಿ ಆರಂಭವಾದ ಆದರ್ಶ ವಿದ್ಯಾಲಯದ ಮಕ್ಕಳು ಮುರುಕು ಶಾಲೆಯಲ್ಲಿ ಕಲಿಯುವಂತಾಗಿದೆ. ಪಟ್ಟಣದ ಈ ಶಾಲೆಯಲ್ಲಿ 400 ಮಕ್ಕಳು ಓದುತ್ತಿದ್ದಾರೆ. ಅರಸೀಕೆರೆಯಲ್ಲಿ 2014ರಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಅದೀಗ ಅನುಪಯುಕ್ತವಾಗಿದೆ. ಈ ಕಟ್ಟಡಕ್ಕೆ ಶಾಲೆ ಸ್ಥಳಾಂತರಿಸಲು ಶಿಕ್ಷಣ ಇಲಾಖೆ ಮೀನಮೇಷ ಎಣಿಸುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ.
ತಾಲೂಕು ಕೇಂದ್ರದಿಂದ 30 ಕಿಮೀ ದೂರದಲ್ಲಿ ಶಾಲೆ ನಿರ್ಮಾಣವಾಗಿದೆ. ಇಲ್ಲಿ ಮಕ್ಕಳಿಗೆ ವಸತಿ ಸೌಲಭ್ಯವಿಲ್ಲ ಎಂಬ ಕಾರಣಕ್ಕೆ ಕೆಲವು ಪಾಲಕರು ಅರಸೀಕೆರೆಯ ಕಟ್ಟಡಕ್ಕೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಇದನ್ನೇ ನೆಪವಾಗಿಸಿಕೊಂಡಿರುವ ಅಧಿಕಾರಿಗಳು ಶಾಲೆಯನ್ನು ಅಲ್ಲಿಗೆ ಸ್ಥಳಾಂತರಿಸದೆ ಸುಮ್ಮನಿದ್ದಾರೆ.
ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಶಾಲೆ ಆರಂಭಿಸಲಾಗಿದೆ. ನಂಜುಂಡಪ್ಪ ವರದಿಯನ್ವಯ ಅತಿ ಹಿಂದುಳಿದ 74 ತಾಲೂಕುಗಳ ಪೈಕಿ ಪಾವಗಡದಲ್ಲಿ ಈ ಶಾಲೆ ಸ್ಥಾಪನೆಗೊಂಡಿದೆ.
ಈ ಶಾಲೆಗೆ 18 ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಸದ್ಯ ಐವರು ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ಸೇವೆ ಬಳಸಿಕೊಳ್ಳಲಾಗುತ್ತಿದೆ. ಆದರೂ, ಕನ್ನಡ, ಇಂಗ್ಲಿಷ್ ಹಾಗೂ ಜೀವಶಾಸ್ತ್ರದ ಬೋಧನೆಗೆ ಶಿಕ್ಷಕರ ಅಗತ್ಯವಿದೆ.
ಪಾಳುಬಿದ್ದಿರುವ ಆದರ್ಶ ವಿದ್ಯಾಲಯ: ಅರಸೀಕೆರೆಯಲ್ಲಿ ನಿರ್ಮಿಸಿರುವ ಶಾಲೆಯ ಹೈಟೆಕ್ ಕಟ್ಟಡ ಪ್ರಸ್ತುತ ಪಾಳು ಬಿದ್ದಿದೆ. ಶಾಲೆ ನಿರ್ಮಾಣ ಹಾಗೂ ಸ್ಥಳಾಂತರ ವಿಷಯದಲ್ಲಿ ರಾಜಕೀಯ ಪ್ರವೇಶಿಸಿರುವುದು ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಕಟ್ಟಡ ನಿರ್ಮಾಣದ ಹಂತದಲ್ಲೇ ಎಲ್ಲ ಮೂಲಸೌಕರ್ಯವಿರುವ ಜಾಗ ಆಯ್ಕೆ ಮಾಡಿಕೊಂಡಿದ್ದರೆ ಈ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ವಸತಿ ಸೌಲಭ್ಯವೇ ಇಲ್ಲದೆ, ಊರಿನಿಂದ ದೂರದ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ.
ಜಿಲ್ಲೆಯ ಏಕೈಕ ಆದರ್ಶ ವಿದ್ಯಾಲಯ: ಪಾವಗಡದ ಈ ಶಾಲೆ ತುಮಕೂರು ಜಿಲ್ಲೆಯ ಏಕೈಕ ಆದರ್ಶ ವಿದ್ಯಾಲಯವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ 6ನೇ ತರಗತಿಗೆ ನೇರ ಪ್ರವೇಶ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿವರೆಗೂ ಕಲಿಯಲು ಅವಕಾಶವಿದೆ.
ಶಾಲೆಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರವೇಶ ನೀಡಲಾಗಿದ್ದು 209 ವಿದ್ಯಾರ್ಥಿನಿಯರು ಸೇರಿ ಒಟ್ಟು 400 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 2016ರಲ್ಲಿ ಹೊಸ ಕಟ್ಟಡ ಉದ್ಘಾಟನೆಗೆ ಸಿದ್ಧವಾಗಿದೆ. ಈ ಕಟ್ಟಡದಲ್ಲಿ ತರಗತಿ ಆರಂಭಿಸಲು ಅಧಿಕಾರಿಗಳು ಅನುಮತಿಸಿದರೆ, ಅಲ್ಲಿಯೇ ಪಾಠಪ್ರವಚನ ಮುಂದುವರಿಸಲು ಸಮಸ್ಯೆ ಇಲ್ಲ. ವೆಂಕಟೇಶ್, ಮುಖ್ಯಶಿಕ್ಷಕ