ಮುರಾರ್ಜಿ ಶಾಲೆಯಲ್ಲಿ 24 ಕ್ವಾರಂಟೈನ್

carona logo
Published on

ಮುಳಗುಂದ: ಸರ್ಕಾರ ಹಾಗೂ ಪಪಂ, ಜಿಲ್ಲಾಡಳಿತದ ನಿರ್ದೇಶನದಂತೆ ಪಟ್ಟಣದ ಮುರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯನ್ನು ಸುಪರ್ದಿಗೆ ತೆಗೆದುಕೊಂಡು ಕ್ವಾರಂಟೈನ್ ಸೆಂಟರ್ ಆಗಿ ಮಾರ್ಪಡಿಸಿದೆ. ಕೇರಳ, ಕಾಸರಗೋಡು ಹೊರ ರಾಜ್ಯದಿಂದ ಬಂದಿರುವ 21 ಜನರನ್ನು ಇಲ್ಲಿಡಲಾಗಿದೆ.

ಬೇರೆಡೆ ಕೂಲಿ ಕೆಲಸ ಮಾಡಲು ಹೋಗಿ ಮರಳಿ ಕರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ದೇಶವೇ ಲಾಕ್​ಡೌನ್ ಆಗಿರುವ ಸಂದರ್ಭದಲ್ಲಿ ಮರಳಿ ವಿವಿಧ ಗ್ರಾಮಗಳಿಗೆ ಒಂದು ವಾರದ ಹಿಂದೆ ಬಂದಿರುವವರನ್ನು ಗುರುತಿಸಿ ನೀಲಗುಂದ ಗ್ರಾಮದ ಒಬ್ಬರು, ಕುರ್ತಕೋಟಿ ಗ್ರಾಮದ 7, ಮುಳಗುಂದ ಪಟ್ಟಣದ 16 ಜನ ಸೇರಿ ಒಟ್ಟು 24 ಜನರನ್ನು ತಪಾಸಣೆಗೊಳಪಡಿಸಿ ಹೋಂ ಕ್ವಾರಂಟೈನ್​ನಲ್ಲಿರಿಸಿದೆ.

ಈ ವೇಳೆ ಮಾತನಾಡಿದ ಗದಗ ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ತಾಲೂಕಿನ ವಿವಿಧೆಡೆಯಿಂದ ಬಂದ ಜನರ ಕರೊನಾ ಸೋಂಕಿನ ಲಕ್ಷಣಗಳು ಇರಬಹುದಾದ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಡಿಸಿ ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಅಲ್ಲದೆ, ಇತರ ಗುಳೆ ಹೋಗಿ ಬಂದವರ ಮೇಲೆಯೂ ನಿಗಾ ಇಡಲಾಗಿದೆ. ಅಂಥವರು ಮನೆಬಿಟ್ಟು ಓಡಾಡುವುದಾಗಲಿ ಕಾನೂನು ಉಲ್ಲಂಘನೆ ಮಾಡುವುದಾಗಲೀ ಕಂಡುಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.

ಪಪಂ ಮುಖ್ಯಾಧಿಕಾರಿ ಎಂ.ಎಸ್. ಬೆಂತೂರ, ಮುಳಗುಂದ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಅಶ್ವಿನಿ ಕಬಾಡೆ, ಪೊಲೀಸ್ ಸಿಬ್ಬಂದಿ ಕಲ್ಲಣ್ಣವರ, ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ಗುಡಿಸಲು ನಿವಾಸಿಗಳಿಗೆ ದಿನಸಿ, ತರಕಾರಿ ವಿತರಣೆ

ರೋಣ: ಕರೊನಾ ವೈರಸ್ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಭೀತಿ ಇರುವ ಪರಿಸ್ಥಿತಿಯಲ್ಲಿಯೂ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಪೌರ ಕಾರ್ವಿುಕರಿಗೆ ಹಾಗೂ ಪಟ್ಟಣದ ನಿರ್ಗತಿಕ ಗುಡಿಸಲುವಾಸಿಗಳಿಗೆ ಪಟ್ಟಣದ ವಿವಿಧ ಸಂಘ-ಸಂಸ್ಥೆಗಳು, ಗೆಳೆಯರ ಬಳಗದವರು ಪ್ರತಿ ನಿತ್ಯ ಆಹಾರ ಸಾಮಗ್ರಿ, ತರಕಾರಿ, ಹಣ್ಣು, ಹಾಲು ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಕರ್ತವ್ಯ ನಿರತ ಪೊಲೀಸರು ಲಾಠಿ ಬಿಸಿದ್ದು, ಬಸ್ಕಿ ಹೊಡೆಸಿದ್ದು, ಬೈಕ್ ಜಪ್ತಿ ಮಾಡಿಕೊಳ್ಳುತ್ತಿರುವ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ. ಇದರೊಂದಿಗೆ ಬಿಸಿಲಿನಲ್ಲಿ ಬಸವಳಿದ ಪೊಲೀಸರಿಗೆ ಮಜ್ಜಿಗೆ, ಶರಬತ್, ಬಿಸ್ಕಿಟ್ ಹಾಗೂ ಆಹಾರ ಪೊಟ್ಟಣಗಳನ್ನು ಕೊಟ್ಟು, ಧನ್ಯತಾಭಾವದಿಂದ ಅವರೊಂದಿಗೆ ತೆಗೆಸಿಕೊಂಡಿರುವ ಛಾಯಾಚಿತ್ರಗಳು ಸ್ಥಳೀಯವಾಗಿ ವೈರಲ್ ಆಗುತ್ತಿವೆ. ಪ್ರವಾಸಿ ಮಂದಿರದ ಹಿಂದುಗಡೆ, ಗಾಂಧಿ ನಗರ, ಜನತಾಪ್ಲಾಟ್, ಜೋಗೇರ ಗುಡಿಸಲುವಾಸಿಗಳನ್ನು ಹುಡುಕಿ ಆಹಾರ ಪೊಟ್ಟಣ, ತರಕಾರಿ, ದಿನಸಿ ವಸ್ತುಗಳನ್ನು ವಿತರಿಸಲಾಗುತ್ತಿದೆ. ಶನಿವಾರ ಪಟ್ಟಣದ ಗುಡಿಸಲುವಾಸಿಗಳಿಗೆ ಅಂಜುಮನ್ ಕಮಿಟಿ ಅಧ್ಯಕ್ಷ ಭಾವಾಸಾಬ್ ಬೆಟಗೇರಿ ನೇತೃತ್ವದಲ್ಲಿ ಪ್ರತಿ ಕುಟುಂಬಕ್ಕೂ 2 ಕೆಜಿ ಅಕ್ಕಿ, 2 ಕೆಜಿ ಗೋಧಿ, 3 ಕೆಜಿ ತರಕಾರಿ ವಿತರಿಸಿದರು. ರೋಣ ಪಟ್ಟಣದ ಪುರಸಭೆ ವತಿಯಿಂದ ಗುಡಿಸಲುಗಳಲ್ಲಿ ವಾಸಿಸುತ್ತಿರುವ 600 ಕುಟುಂಬಗಳಿಗೆ ತಲಾ ಅರ್ಧ ಲೀಟರ್​ನಂತೆ 300 ಲೀಟರ್ ಹಾಲು ವಿತಲಸಲಾಯಿತು.

ಬಡವರಿಗೆ ಹಾಲು ವಿತರಣೆ

ಲಕ್ಷ್ಮೇಶ್ವರ: ಕರೊನಾ ವೈರಾಣು ತಡೆಗಟ್ಟಲು ಸರ್ಕಾರ ಇಡೀ ದೇಶವನ್ನೇ ಲಾಕ್​ಡೌನ್ ಘೊಷಿಸಿದ್ದರಿಂದ ಬಡವರ, ಕೂಲಿಕಾರರ, ಕೊಳಗೇರಿ ಪ್ರದೇಶಗಳ ಜನರಿಗೆ ಜೀವನಾವಶ್ಯಕ ವಸ್ತುಗಳನ್ನು ಒದಗಿಸುವ ಜತೆಗೆ ಉಚಿತವಾಗಿ ಹಾಲನ್ನೂ ವಿತರಿಸುವ ಕಾರ್ಯ ಮಾಡುತ್ತಿದೆ ಎಂದು ತಹಸೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಹೇಳಿದರು.

ಅವರು ಶನಿವಾರ ಕೆಎಂಎಫ್​ನಿಂದ ಪಟ್ಟಣದ ಬಡ ಜನರಿಗೆ ವಿತರಿಸಲು ಬಂದಿರುವ ಅರ್ಧ ಲೀಟರ್​ನ 1 ಸಾವಿರ ಹಾಲಿನ ಪ್ಯಾಕೆಟ್​ಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಬಳಿಕ ಪುರಸಭೆ ಸಿಬ್ಬಂದಿ ಪಟ್ಟಣದ ಸ್ಲಂ ಪ್ರದೇಶಗಳು, ಗುಡಿಸಲು ವಾಸಿಗಳು, ಬಡಕೂಲಿಕಾರರ ಕುಟುಂಬಗಳಿಗೆ ಹಾಲಿನ ಪ್ಯಾಕೆಟ್​ಗಳನ್ನು ವಿತರಿಸಿದರು. ಪುರಸಭೆ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ, ಪಿಎಸ್​ಐ ಶಿವಯೋಗಿ ಲೋಹಾರ, ಆನಂದ ಬದಿ, ಮಂಜುನಾಥ ಮುದಗಲ್, ಬಸವಣ್ಣೆಪ್ಪ ನಂದೆಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net