ಮುರಗೋಡದಲ್ಲಿ ಕಸ ವಿಲೇವಾರಿ ಸಮಸ್ಯೆ

12-3
ಮುರಗೋಡ ಗ್ರಾಮದ ಪ್ರಮುಖ ಬೀದಿಯೊಂದರ ಪಕ್ಕ ಜನರು ಎಸೆದಿರುವ ಕಸದ ರಾಶಿ.
Published on

ಮಹಾಂತೇಶ ಬಾಳಿಕಾಯಿ ಮುರಗೋಡ: ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಕಸ ವಿಲೇವಾರಿ ಮಾಡದಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಬಿದ್ದು ವಾತಾವರಣವೇ ಗಬ್ಬೆದ್ದು ಹೋಗಿದೆ. ಗ್ರಾಪಂ ನಿರ್ಲಕ್ಷ್ಯಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮುರಗೋಡ ಗ್ರಾಮ 31 ಗ್ರಾಪಂ ಸದಸ್ಯರನ್ನು ಹೊಂದಿದೆ. ಎಲ್ಲ ವಾರ್ಡ್‌ಗಳ ಪ್ರಮುಖ ಬೀದಿಗಳಲ್ಲಿ ಗಟಾರ, ರಸ್ತೆ ಬದಿಯಲ್ಲಿ ಸಾರ್ವಜನಿಕರು ಹಸಿ ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುತ್ತಿದ್ದಾರೆ. ವಿಲೇವಾರಿಗೆ ಸೂಕ್ತ ಸ್ಥಳ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಗುಡ್ಡೆ ಹಾಕುತ್ತಿರುವುದರಿಂದ ಹಂದಿ, ನಾಯಿ, ಕೋಳಿ ಆ ಕಸವನ್ನುಚೆಲ್ಲಾಪಿಲ್ಲಿ ಮಾಡುತ್ತಿವೆ. ಮಳೆ ಅವಾಂತರದಿಂದ ಕೊಳಚೆ ತಾಂಡವಾಡುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಎಲ್ಲೆಂದರಲ್ಲಿ ಎಸೆಯುತ್ತಿರುವ ತ್ಯಾಜ್ಯದಿಂದಾಗಿ ಸೊಳ್ಳೆ ಕಾಟವೂ ಹೆಚ್ಚಾಗಿದ್ದು, ಜನ ತೂಂದರೆ ಅನುಭವಿಸುತ್ತಿದ್ದಾರೆ.

ಆದರೆ, ಗ್ರಾಪಂ ಸದಸ್ಯರು ಗಮನ ಹರಿಸದೇ ಇರುವುದು ವಿಪರ್ಯಾಸ. ಮುರಗೋಡ ಮಾದರಿ ಶಾಲೆ ಹತ್ತಿರ, ಹಳೆಯ ಬಸ್ ನಿಲ್ದಾಣದ ರಸ್ತೆ, ಶ್ರೀಮಠದ ಹಿಂಭಾಗದಲ್ಲಿ ಹಾಗೂ ಪ್ರತಿ ಗಲ್ಲಿ ಗಲ್ಲಿಯಲ್ಲಿ ಕಸ, ಘನತ್ಯಾಜ್ಯ ವಿಲೇವಾರಿ ಇಲ್ಲದೆ ಎಲ್ಲೆಡೆ ಕೂಳಚೆ ಹೆಚ್ಚಾಗಿ ವಿವಿಧ ಮಾರಕ ರೋಗಗಳು ಹೆಚ್ಚಾಗುತ್ತಿದೆ ಎಂದು ಜನರು ದೂರಿದ್ದಾರೆ.

ಕದಲದ ಸ್ವಚ್ಛ ವಾಹಿನಿ ವಾಹನ: ಆರು ತಿಂಗಳ ಹಿಂದೆ ಉದ್ಘಾಟಿಸಿದ ಸ್ವಚ್ಛ ವಾಹಿನಿ ವಾಹನ ಗ್ರಾಪಂ ಎದುರು ನಿಂತಿದೆ. 2 ತಿಂಗಳಿಂದ ಆ ಜಾಗ ಬಿಟ್ಟು ಕದಲಿಲ್ಲ. ಕಸ ಸಂಗ್ರಹಿಸಲು ಅನುಕೂಲವಾಗುವಂತೆ ಮನೆ ಮನೆಗೆ ಎರಡು ಬಕೆಟ್ ನೀಡಲಾಗಿದ್ದು, ವಾಹನ ಬಾರದ ಕಾರಣ ಗೃಹಿಣಿಯರು ಆ ಬಕೆಟ್‌ಗಳನ್ನು ಮನೆ ಕೆಲಸಕ್ಕೆ ಉಪಯೋಗಿಸುತ್ತಿದ್ದಾರೆ. ಕಸ, ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳನ್ನು ರಸ್ತೆಗೆ ಚೆಲ್ಲುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net