ಮುಮ್ಮಡಿ ಕೃಷ್ಣರಾಜ ಒಡೆಯರ್ ಸೇವೆ ಅನನ್ಯ: ಸಿ.ಎನ್.ಮಂಜೇಗೌಡ ಬಣ್ಣನೆ

16
Published on

ಮೈಸೂರು: ಸಂಕಷ್ಟ ಕಾಲದಲ್ಲಿ ಮೈಸೂರು ರಾಜ್ಯವನ್ನು ಸಂರಕ್ಷಣೆ ಮಾಡಿ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತರಿಸಿದ ಕೀರ್ತಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ವಿಧಾನಪರಿಷತ್ತಿನ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಕರ್ನಾಟಕ ಸೇನಾ ಪಡೆಯಿಂದ ಶನಿವಾರ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 229ನೇ ಜಯಂತಿ ಅಂಗವಾಗಿ ನಗರದ ಮಹಾರಾಜ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಮುಮ್ಮಡಿ ಕೃಷ್ಣರಾಜ ಒಡೆಯರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಮುಮ್ಮಡಿ ಅವರ ಕೊಡುಗೆ ನಮ್ಮ ನಾಡಿಗೆ ಅಪಾರ. ಟಿಪ್ಪುವಿನ ಕಾಲಾನಂತರ ಬಹಳ ಕಷ್ಟದಲ್ಲಿದ್ದ ಮೈಸೂರು ಸಂಸ್ಥಾನವನ್ನು ಕಟ್ಟಿ ಬೆಳೆಸಿ ಶ್ರೀರಂಗಪಟ್ಟಣದಿಂದ ರಾಜಧಾನಿಯನ್ನು ಮೈಸೂರಿಗೆ ತಂದರು. ಮೊಟ್ಟ ಮೊದಲು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಬಹಳ ಶಿಕ್ಷಣ ಸಂಸ್ಥೆಗಳನ್ನು ತೆರೆದು ಎಂದು ಹೇಳಿದರು.
ಮಹಾರಾಜ, ಮಹಾರಾಣಿ ಕಾಲೇಜುಗಳನ್ನು ಸ್ಥಾಪಿಸಿದ್ದಲ್ಲದೇ ಕಲೆ ಸಾಹಿತ್ಯಕ್ಕೆ ಬಹಳ ಒತ್ತು ನೀಡಿದರು. ಚಾಮುಂಡೇಶ್ವರಿ ದೇವಿಯ ಮಹಾನ್ ಆರಾಧಕರಾಗಿದ್ದರು. ಇಡೀ ದೇಶದೊಂದಿಗೆ ನಾವು ಎಲ್ಲೇ ಹೋದರೂ ಮೈಸೂರಿನವರು ಎಂದು ಹೇಳಿದರೆ ರಾಜರ ಊರಿನವರು ಎನ್ನುವ ಗೌರವ ದೊರೆಯುತ್ತದೆ. ಇಂತಹ ಮಹನೀಯರ ತತ್ವ ಆದರ್ಶಗಳನ್ನು ಶಾಲೆಗಳಲ್ಲಿಯೇ ಎಲ್ಲ ಮಕ್ಕಳಿಗೂ ತಿಳಿಸಿ ಹೇಳಬೇಕು ಎಂದರು.
ಸಮಾಜ ಸೇವೆಕ ರಘುರಾಂ ಕೆ. ವಾಜಪೇಯಿ ಮಾತನಾಡಿ, ಮುಮ್ಮಡಿ ಅವರನ್ನು ಕನ್ನಡದ ಭೋಜರಾಜ ಎಂದೇ ಬಣ್ಣಿಸಲಾಗುತ್ತದೆ. ಚಿಕ್ಕವಯಸ್ಸಿನಲ್ಲಿಯೇ ಅಧಿಕಾರ ವಹಿಸಿಕೊಂಡ ಮುಮ್ಮಡಿ ಅವರು, ಶಿಕ್ಷಣ, ಕಲೆ, ಸಾಹಿತ್ಯ ಪರಂಪರೆಗಳಿಗೆ ಹೆಚ್ಚು ಒತ್ತನ್ನು ನೀಡಿ ಸಮಗ್ರ ಸಾಹಿತ್ಯಕ್ಕೆ ಭದ್ರಬುನಾದಿ ಹಾಕಿದ್ದರು ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಲಯನ್ಸ್ ಸಂಸ್ಥೆಯ ಗೋಲ್ಡ್ ಸುರೇಶ್, ಡಾ. ಪಿ ಶಾಂತರಾಜೇ ಅರಸ್, ಮಹಾರಾಜ ಪ್ರಾಂಶುಪಾಲ ಉದಯಶಂಕರ್, ವಿವಿಧ ಸಂಘಟನೆಗಳ ಮುಖಂಡರಾದ ಹೇಮಾವತಿ, ಜಗದೀಶ್‌ಗೌಡ, ವಿಜಯೇಂದ್ರ, ಕೃಷ್ಣಯ್ಯ, ಅನಿಲ್, ಚಂದ್ರು, ಅಂಬಾ ಅರಸ್, ನೇಹಾ, ಪ್ರಭಾಕರ್, ಶಿವಲಿಂಗಯ್ಯ, ಪದ್ಮ, ಎಳನೀರು ರಾಮಣ್ಣ, ದರ್ಶನ್‌ಗೌಡ, ಮಹಾದೇವಸ್ವಾಮಿ, ರವಿ ನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net