

ಹುಬ್ಬಳ್ಳಿ: ಮಾಜಿ ಸಚಿವ, ಬಿಜೆಪಿಯ ಶಂಕರಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ, ಅವರು ಪಕ್ಷಕ್ಕೆ ಬರುವುದಾದರೆ ಸ್ವಾಗತ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರದಿಂದ 9 ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ ಎನ್ನುತ್ತಾರೆ. ರಾಜ್ಯದಲ್ಲಿ 5 ವರ್ಷಗಳ ಕಾಲ ಶೇ. 40 ರಷ್ಟು ಕಮೀಷನ್ ಸರ್ಕಾರ ಇದ್ದರೂ ಪ್ರಧಾನಿ ನರೇಂದ್ರ ಮೋದಿ ಅದಕ್ಕೆ ಒಳ್ಳೆಯ ಸರ್ಕಾರ ಎಂದು ಪ್ರಮಾಣಪತ್ರ ಕೊಟ್ಟಿದ್ದರು. ಈಗ ಅವರು ಅಧಿಕಾರ ಕಳೆದುಕೊಂಡಿದ್ದಾರೆ. ಇನ್ನು ನಮ್ಮ ಸರ್ಕಾರ ಬಂದು ಒಂದು ತಿಂಗಳು ಕೂಡ ಆಗಿಲ್ಲ. ಆಗಲೇ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯವರು ಎಲ್ಲದಕ್ಕೂ ಸುಳ್ಳು ಹೇಳುತ್ತಾರೆ. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ, ರೈತರ ಸಾಲ ಮನ್ನಾ ಮಾಡುತ್ತೇವೆ, ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದು ಹೇಳಿದ್ದರು. ಬುಲೆಟ್ ಟ್ರೇನ್ ಎಲ್ಲಿದೆ? ಇದೆಲ್ಲ ಯಾಕೆ ಜಾರಿಗೆ ತಂದಿಲ್ಲ. ನಾವು ಅಕ್ಕಿ ಬದಲು ದುಡ್ಡು ಕೊಟ್ಟರೆ ಬಿಜೆಪಿಯವರಿಗೆ ತೊಂದರೆ ಯಾಕೆ ಎಂದು ಪ್ರಶ್ನಿಸಿದರು.