

ಹಾಸನ: ದಲಿತರ ಹಾಗೂ ಮಹಿಳೆಯರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಗರದ ಎಸ್ಪಿ ಕಚೇರಿ ಎದುರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ವಿರುದ್ಧ ಘೋಷಣೆ ಕೂಗಿ ದಿಕ್ಕಾರ ಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯಲ್ಲೂ ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಎಚ್.ಕೆ. ಮಹೇಶ್ ಮಾತನಾಡಿ, ಶಾಸಕ ಮುನಿರತ್ನ ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದುಕೊಂಡು ಮಹಿಳೆಯರ ಬಗ್ಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರ ಬಗ್ಗೆ ಆವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿರುವುದು ಸಮಾಜವೇ ತಲೆತಗ್ಗಿಸುವ ಹೀನ ಕೃತ್ಯ. ಆತ ಮಾತನಾಡಿರುವ ಅಸಂವಿಧಾನಿಕ ಪದಗಳು ಬಿಜೆಪಿಯವರ ಮನಸ್ಥಿತಿಯನ್ನು ತೋರಿಸುತ್ತದೆ. ದಲಿತರ ಹಾಗೂ ಮಹಿಳೆಯರ ಬಗ್ಗೆ ಬಿಜೆಪಿ ಹೊಂದಿರುವ ನಿಲುವು ಏನೆಂಬುದು ಶಾಸಕ ಮುನಿರತ್ನ ಅವರ ನಡವಳಿಕೆಯಿಂದ ಜಗತ್‌ಜಾಹಿರಾಗಿದೆ. ಕೂಡಲೇ ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆತನ ವಿರುದ್ಧ ಕಠಿಣ ಕ್ರಮ ಜರುಗಿಸಿ ಗಡಿಪಾರು ಮಾಡಬೇಕು. ಇಂತಹ ನೀಚರಿಂದ ಇಡೀ ರಾಜಕೀಯ ವ್ಯವಸ್ಥೆಗೆ ಕಳಂಕ ಬರಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಎಸ್‌ಸಿ, ಎಸ್‌ಟಿ ವಿಭಾಗದ ಅಧ್ಯಕ್ಷ ಮಲ್ಲಿಗೆವಾಳು ದೇವಪ್ಪ ಮಾತನಾಡಿ, ಸಂವಿಧಾನಾತ್ಮಕ ಸ್ಥಾನ ಅಲಂಕರಿಸಿರುವ ಶಾಸಕ ಮುನಿರತ್ನ ಗುತ್ತಿಗೆದಾರರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆತನಿಗೆ ಪ್ರಾಣ ಬೆದರಿಕೆ ಹಾಕಿರುವ ಮುನಿರತ್ನ ತನ್ನ ಸ್ಥಾನದಲ್ಲಿ ಮುಂದುವರೆಯಲು ಅನರ್ಹ. ಕೂಡಲೇ ರಾಜ್ಯಪಾಲರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುನಿರತ್ನ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. ಈ ಹಿಂದೆಯೂ ಕೂಡ ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಾಸಕ ಮುನಿರತ್ನ, ವಿವಿಧ ಸಮುದಾಯಗಳ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ. ರೌಡಿಗಳ ನಂಟು ಹೊಂದಿರುವ ಮುನಿರತ್ನ ರೌಡಿಗಳನ್ನು ಮುಂದಿಟ್ಟುಕೊಂಡು ಅಮಾಯಕರನ್ನು ಬೆದರಿಸಿ ರಾಜಕೀಯ ಮಾಡುತ್ತಿದ್ದಾರೆ. ಈ ಎಲ್ಲಾ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಜತೆಗೆ ಆತನನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಕಾಂಗ್ರೆಸ್ ಮುಖಂಡರಾದ ಡಿ.ಸಿ.ಸಣ್ಣಸ್ವಾಮಿ, ಚಂದ್ರು, ವಿಶ್ವನಾಥ್, ತಾರಾಚಂದನ್, ಅಶೋಕ್ ನಾಯಕರಹಳ್ಳಿ, ರಾಘು ಸಿದ್ದಯ್ಯ ನಗರ, ಅರಸೀಕೆರೆ ವೆಂಕಟೇಶ್, ರಘು, ವೆಂಕಟೇಶ್ ವಿದ್ಯಾನಗರ, ಅಬ್ದುಲ್ ಕಯುಮ್, ನಾಗರಾಜ್, ಗಣೇಶ್, ಅಶೋಕ್ ನಾಯಕರಹಳ್ಳಿ, ಅಬ್ದುಲ್ ಕಹಿಂ, ಪ್ರಕಾಶ್, ರಾಘವೇಂದ್ರ, ಮಹಿಳಾ ಮುಖಂಡರಾದ ರತ್ನಮ್ಮಾ, ಭಾಗ್ಯಾ, ಇತರರು ಉಪಸ್ಥಿತರಿದ್ದರು.