ಮುನಿ, ಸಾಧುಗಳಿಗೆ ರಕ್ಷಣೆ ನೀಡಲು ಆಗ್ರಹ

1
Published on

ಮೈಸೂರು: ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಹತ್ಯೆ ಇಡೀ ಸಮಾಜಕ್ಕೆ ಆಘಾತ ಉಂಟು ಮಾಡಿದೆ. ಅಹಿಂಸೆಯನ್ನೆ ಧರ್ಮ ಎಂದು ಬದುಕುತ್ತಿರುವ ಜೈನ ಮುನಿಗಳು ಹಾಗೂ ಸಾಧುಗಳಿಗೆ ಸರ್ಕಾರ ರಕ್ಷಣೆ ನೀಡಬೇಕು ಎಂದು ಮೇಲುಕೋಟೆಯ ವೆಂಗಿಪುರ ಮಠದ ಶ್ರೀಇಳೈ ಆಳ್ವಾರ್ ಸ್ವಾಮೀಜಿ ಸರ್ಕಾರವನ್ನು ಆಗ್ರಹಿಸಿದರು.
ನಗರದ ಜೆಎಲ್ಬಿ ರಸ್ತೆಯಲ್ಲಿರುವ ಶ್ರೀಪಾಶ್ವನಾಥ ದಿಗಂಬರ ಜಿನಮಂದಿರದಲ್ಲಿ ಅಪೂರ್ವ ಸ್ನೇಹ ಬಳಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಅವರ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.
ಮುನಿಗಳ ಹತ್ಯೆ ಮಾಡಿದವರಿಗೆ ಸರ್ಕಾರ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಆಚರಣೆಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನಗರಪಾಲಿಕ ಸದಸ್ಯ ಮಾ.ವಿ.ರಾಮಪ್ರಸಾದ್ ಮಾತನಾಡಿ, ಜೈನ ಸಮಾಜ ಶಾಂತಿ ಪ್ರಿಯ ಸಮಾಜ. ಅಹಿಂಸಾ ಮಾರ್ಗ ಸಮಾಜದ ಮೂಲಮಂತ್ರ. ಆದರೆ ಮುನಿಗಳನ್ನು ಕರೆಂಟ್ ಶಾಕ್ ನೀಡಿ, ಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮೃತ ದೇಹವನ್ನು ತುಂಡರಿಸಿ ಬೋರ್‌ವೆಲ್ನಲ್ಲಿ ಹಾಕಿರುವುದು ಅತ್ಯಂತ ಅಮಾನೀಯ ಘಟನೆ. ಸದಾ ಸಮಾಜದ ಒಳಿತಿಗೆ ಶ್ರಮಿಸುವ ಜೈನ ಸಮಾಜದ ಮುನಿಗಳ ಹತ್ಯೆ ಆಗಿರುವುದು ಖಂಡನೀಯ ಎಂದರು.
ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಮೈ.ಲಾ.ವಿಜಯ್ಕುಮಾರ್, ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಶಮಾನಂದ್‌ಸಾಗರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ಶಾಸ್ತ್ರಿ, ಚಿನ್ನ ಬೆಳ್ಳಿ ವ್ಯಾಪಾರ ನೌಕರರ ಸಂಘದ ಅಧ್ಯಕ್ಷ ಸುರೇಶ್ ಗೋಲ್ಡ್, ಉದ್ಯಮಿ ಜಯರಾಮ್, ಮುಖಂಡರಾದ ಧರ್ಮರಾಜ್, ನಾಗೇಶ್, ಸಂದೀಪ್, ಎಸ್.ಎನ್. ರಾಜೇಶ್, ಭೈರತಿ ಲಿಂಗರಾಜು, ಸುಚೇಂದ್ರ, ಧರ್ಮೇಂದ್ರ, ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net