ಮುಧೋಳದಲ್ಲಿ ಗುರುವಂದನಾ ಕಾರ್ಯಕ್ರಮ

Guru Vandana program in Mudhol
Guru Vandana program in Mudhol
Published on

ಮುಧೋಳ: ಗುರುಗಳ ಮಾರ್ಗದರ್ಶನ ಜೀವನುದುದ್ದಕ್ಕೂ ಅಗತ್ಯ. ಬದುಕಿನ ಆರಂಭದ ಮೆಟ್ಟಿಲುಗಳನ್ನು ಕಲಿಸುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನಂತೂ ಮರೆಯುವುದು ಅಸಾಧ್ಯ ಎಂದು ಹಳೆಯ ವಿದ್ಯಾರ್ಥಿ ಗಣೇಶ ಮಾಶೆಟ್ಟಿ ಅಭಿಪ್ರಾಯಪಟ್ಟರು.

ಸ್ಥಳೀಯ ಕರ್ನಾಟಕ ಡೆಕೋರೇಷನ್ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡ 1994ರಿಂದ 2001ರವರೆಗೆ ಸರ್ಕಾರಿ ಜೈ ಹಿಂದ್ ಪ್ರಾಥಮಿಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸರ್ಕಾರಿ, ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಸಮಾಜದಲ್ಲಿ ಛಲ, ಹಿಂಜರಿಕೆ ಇಲ್ಲದೆ ಮುನ್ನಡೆಯಲು ಸಾಧ್ಯ ಎಂದರು.

ನಿವೃತ್ತ ಶಿಕ್ಷಕ ಬಿ.ಎಂ. ಜಲಗೇರಿ ಹಾಗೂ ಸಿ.ಸಿ.ಹಿರೇಮಠ ಮಾತನಾಡಿ, ಮುಧೋಳ ಒಂದು ಶಕ್ತಿ ಕೇಂದ್ರ. ರನ್ನ ಕವಿ ನಡೆದಾಡಿದ ನಗರದಲ್ಲಿ ಕಲಿತ ಎಲ್ಲರೂ ಪುಣ್ಯವಂತರು. ನಮ್ಮ ಮಕ್ಕಳು ಕೂಡ ಗೌರವಿಸದ ಈ ಕಾಲ ಘಟ್ಟದಲ್ಲಿ ಹಳೆಯ ವಿದ್ಯಾರ್ಥಿಗಳು ನಮ್ಮನ್ನು ನಡೆಸಿಕೊಂಡ ರೀತಿ ಅದ್ಭುತ. ಅದನ್ನು ಮಾತಿನಲ್ಲಿ ವರ್ಣಿಸಲಸಾಧ್ಯ ಎಂದು ಭಾವುಕರಾಗಿ ಮಾತನಾಡಿದರು.

ನಿವತ್ತ ಶಿಕ್ಷಕ ಜಿ.ಬಿ. ಜೋಶಿ ಮಾತನಾಡಿದರು.

ಹಳೆಯ ವಿದ್ಯಾರ್ಥಿಗಳಾದ ಗಣೇಶ ಮಾಶೆಟ್ಟಿ, ಶಂಕರ ಮೇತ್ರಿ , ಅರ್ಜುನ ಹದಗಲ, ಗಿರೀಶ ಕಳ್ಳಿಮನಿ, ಚಂದ್ರು ಹಿರಲಕ್ಕಿ, ಹಣಮಂತ ಮಾಂಗ, ಅಪ್ಪು ದೊಡಮನಿ, ರೇಶ್ಮಾ ಪೂಜಾರಿ, ಶ್ರೀದೇವಿ ತೇಲಿ, ರಾಜೇಶ್ವರಿ ತೇಲಿ, ರಾಧಾ ಮಾಂಗ ಮಾತನಾಡಿದರು. ಎಲ್ಲ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೇ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ, ಆಟಗಳು ಜರುಗಿದವು.

ಗುರುಮಾತೆ ಎಂ. ಎಸ್. ಜಾಧವ ಹಳೆಯ ವಿದ್ಯಾರ್ಥಿಗಳ ಹಾಜರಾತಿ ಪಡೆದರು. ಗುರುಮಾತೆ ಎಸ್. ಆರ್. ಪಾಟೀಲ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ ಅಣಕು ಪ್ರದರ್ಶನ ಎಲ್ಲರಲ್ಲಿ ಹಳೆಯ ದಿನಗಳನ್ನು ನೆನಪಿಸುವಂತೆ ಮಾಡಿತು. ಇದಕ್ಕೂ ಮುಂಚೆ ತೆರೆದ ವಾಹನದಲ್ಲಿ ಶಿಕ್ಷಕರನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ಹಾಲ್‌ಗೆ ಕರೆತಂದಿದ್ದು ಗಮನ ಸೆಳೆಯಿತು. ಮಲ್ಲು ಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ತೇಲಿ ಸ್ವಾಗತಿಸಿದರು. ವಾಸುದೇವ ಮೇತ್ರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net