

ಗದಗ: ನಗರದ ಪಿ.ಸಿ. ಶಾಬಾದಿಮಠ ಬುಕ್ ಡಿಪೋ ಮಾಲೀಕ ಹಾಗೂ ಮುದ್ರಣ ಭಾಸ್ಕರ ಪ್ರಶಸ್ತಿ ಪುರಸ್ಕೃತ ಉದ್ಯಮಿ ಚಂದ್ರಶೇಖರಯ್ಯ (ಬಸವರಾಜ) ಶಿವಯ್ಯ ಶಾಬಾದಿಮಠ (76) ಸೋಮವಾರ ರಾತ್ರಿ ನಿಧನ ಹೊಂದಿದರು.
ಬಸವರಾಜ ಶಾಬಾದಿಮಠ ಅವರ ಕುಟುಂಬ ಶತಮಾನದಿಂದ ಪ್ರಕಾಶನ ಹಾಗೂ ಮುದ್ರಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಶಾಬಾದಿಮಠ ಬುಕ್ ಡಿಪೋವನ್ನು ನಾಡಿನಾದ್ಯಂತ ಪರಿಚಯಿಸಿದ ಕೀರ್ತಿ ಬಸವರಾಜ ಅವರಿಗೆ ಸಲ್ಲಿಸುತ್ತದೆ. 1925ರಲ್ಲಿಯೇ ಅವರ ಅಜ್ಜ ಪಶುಪತಯ್ಯ ಶಾಬಾದಿಮಠ ಪುಸ್ತಕದ ಮಳಿಗೆ ಆರಂಭಿಸಿದರು. ತದ ನಂತರ ಅವರ ತಂದೆ ಶಿವಯ್ಯ ಅವರು ಪ್ರಕಾಶನ ಹಾಗೂ ಮುದ್ರಣ ಆರಂಭಿಸಿದರು. ಬಸವರಾಜ ಶಾಬಾದಿಮಠ ಅವರು 1950 ರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಪ್ರಿಂಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಸತತ ಏಳು ದಶಕಗಳ ಕಾಲ ಮುದ್ರಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಪ್ರೆಸ್ನಲ್ಲಿ ಅತ್ಯಾಧುನಿಕ ಯಂತ್ರಗಳ ಮೂಲಕ ಮುದ್ರಿಸಿ ಗ್ರಾಹಕರ ಬೇಡಿಕೆಗಳ ತಕ್ಕಂತೆ ಸೇವೆ ನೀಡಿ ಶಾಬಾದಿಮಠ ಸಂಸ್ಥೆಯನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಶ್ರೇಯಸ್ಸು ಇವರದು.
ಶಾಬಾದಿಮಠ ಪ್ರಿಂಟಿಂಗ್ ಪ್ರೆಸ್ನಿಂದ ಕ್ಯಾಲೆಂಡರ್, ಪಂಚಾಂಗ, ಅಂಕಲಿಪಿ, ನೋಟ್ಬುಕ್ಗಳು, ಡಿಕ್ಷನರಿ, ಡೈರಿಗಳು, ವಾಲ್ ಪೋಸ್ಟರ್, ಆಮಂತ್ರಣ ಪತ್ರಿಕೆ, ಎಲ್ಲ ತರಹದ ಹ್ಯಾಂಡ್ಬಿಲ್ಗಳು, ಧಾರ್ವಿುಕ ಪುಸ್ತಕಗಳು, ನಾಟಕಗಳು, ಕತೆ-ಕಾದಂಬರಿ, ಖಾತಾ ರ್ಕಿದಿ ಪುಸ್ತಕಗಳನ್ನು ಪ್ರಿಂಟ್ ಮಾಡಲಾಗುತ್ತಿದೆ. ಶಾಬಾದಿಮಠ ಪ್ರೆಸ್ನಿಂದ ಹೊರತರುತ್ತಿರುವ ಪಂಚಾಂಗ ಮತ್ತು ಕ್ಯಾಲೆಂಡರ್ ಕನ್ನಡಿಗರ ಮನೆ ಮಾತಾಗಿದೆ. ಉತ್ತರ ಕರ್ನಾಟಕದ ಪ್ರತಿ ಮನೆಯಲ್ಲೂ ಶಾಬಾದಿಮಠ ಕ್ಯಾಲೆಂಡರ್ ಇರಲೇಬೇಕು ಎಂಬಷ್ಟು ಜನಪ್ರಿಯತೆ ಗಳಿಸಿಕೊಂಡಿದೆ. ಇದರ ರೂವಾರಿ ಬಸವರಾಜ ಶಾಬಾದಿಮಠ ಎಂದರೆ ತಪ್ಪಾಗಲಾರದು. ಲಿಂ.ಶ್ರೀ ಬಸಯ್ಯ ಶಾಸ್ತ್ರಿಗಳು ಬರೆದುಕೊಡುತ್ತಿದ್ದ ಪಂಚಾಂಗ ಮತ್ತು ಕ್ಯಾಲೆಂಡರ್ ಶಾಬಾದಿಮಠ ಪ್ರೆಸ್ನಲ್ಲಿ ಪ್ರಿಂಟಾಗುತ್ತಿತ್ತು. ಈ ಕ್ಯಾಲೆಂಡರ್ಗಾಗಿ ಜನರು ಇಂದಿಗೂ ಕಾಯುವಂತಾಗಿದೆ. ಹತ್ತಾರು ಸಂಸ್ಥೆಗಳು ಕ್ಯಾಲೆಂಡರ್ಗಳನ್ನು ಹೊರತಂದರೂ ಶಾಬಾದಿಮಠ ಅವರ ಕ್ಯಾಲೆಂಡರ್ಗೆ ಹೆಚ್ಚು ಬೇಡಿಕೆ.
ಸೌಮ್ಯ ಸ್ವಭಾವದ ಚಂದ್ರಶೇಖರಯ್ಯ ಶಾಬಾದಿಮಠ ಅವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪಂಚಪೀಠಗಳ ಪರಮಭಕ್ತರಾಗಿದ್ದರು. ಅಲ್ಲದೆ, ಬೆಟಗೇರಿಯಲ್ಲಿ ನಿರ್ವಿುಸಲಾಗಿರುವ ರೇಣುಕಾಚಾರ್ಯ ಸಮುದಾಯ ಭವನದ ಕಾರ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ತಮ್ಮ ಅಳಿಲು ಸೇವೆ ನೀಡುತ್ತಿದ್ದರು. ಆದರೆ, ಎಂದಿಗೂ ಪ್ರಚಾರ ಬಯಸಿದವರಲ್ಲ. ಕಾಯಕದಲ್ಲಿಯೇ ಕೈಲಾಸ ಕಂಡವರು. ಮಠಮಾನ್ಯಗಳ ಜಾತ್ರೆ, ಮತ್ತಿತರ ಕಾರ್ಯಗಳಿಗೆ ಪ್ರಚಾರ ಸೇವೆ ನೀಡುತ್ತಿದ್ದರು. ಈ ಭಾಗದಲ್ಲಿ ಯಾವುದೇ ಫಲಾಫೇಕ್ಷೆ ಇಲ್ಲದೆ ಮಾಡಿದ ಅವರ ಸೇವೆ ಪಡೆಯದ ಮಠಗಳೇ ಇಲ್ಲ ಎನ್ನಬಹುದು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವಂತಹ ಕಾರ್ವಿುಕರ ಕಷ್ಟಗಳಿಗೆ ಸ್ಪಂದಿಸುವಂತಹ ಭಾವನಾ ಜೀವಿ ಅವರಾಗಿದ್ದರು. ಹೀಗೆ ಎಲೆ ಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದ ಚಂದ್ರಶೇಖರಯ್ಯ ಅವರಿಗೆ ಕಾಶಿ ಶ್ರೀ ಚಂದ್ರಶೇಖರ ಪಂಡಿತಾರಾಧ್ಯ ಜಗದ್ಗುರುಗಳು ಮುದ್ರಣ ಭಾಸ್ಕರ ಪ್ರಶಸ್ತಿ ಗೌರವಿಸಿದರು. ಬಸವರಾಜ ಅವರಿಗೆ ಓರ್ವ ಪುತ್ರ, ಐವರು ಪುತ್ರಿಯರು ಹಾಗೂ ಅಪಾರ ಬಂಧುಬಳಗ ಇದ್ದಾರೆ.
ಸಂತಾಪ: ಬಸವರಾಜ ಶಾಬಾದಿಮಠ ಅವರ ನಿಧನಕ್ಕೆ ವಿಆರ್ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಉದ್ಯಮಿದಾರರಾದ ದಯಾನಂದ ಸಂಕೇಶ್ವರ, ಮೃತ್ಯುಂಜಯ ಸಂಕೇಶ್ವರ, ಮಲ್ಲಿಕಾರ್ಜುನ ಸಂಕೇಶ್ವರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಬಸವರಾಜ ಶಾಬಾದಿಮಠ ಅವರ ಕಾರ್ಯಕ್ಷಮತೆಯಿಂದ ಶಾಬಾದಿಮಠ ಪ್ರೆಸ್ ನಾಡಿನಲ್ಲಿ ಸಾಕಷ್ಟು ಹೆಸರು ಗಳಿಸಿದೆ. ಅವರ ಅಗಲಿಕೆ ಅತೀವ ದುಃಖ ತಂದಿದೆ ಎಂದು ತಿಳಿಸಿದ್ದಾರೆ.