

ಚಿಕ್ಕಮಗಳೂರು: ಅಕ್ರಮ ಸಂಬಂಧ ಹೊಂದಿದ್ದ ಸೊಸೆಯೊಬ್ಬಳು ಅತ್ತೆಗೆ ಮುದ್ದೆಯಲ್ಲಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿಕೊಡುವ ಮೂಲಕ ಕೊಲೆ ಮಾಡಿರುವ ಘಟಮೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಎಸ್ ಪಿ ವಿಕ್ರಮ ಅಮಟೆ ತಿಳಿಸಿದರು.
ನಗರದ ಪೊಲೀಸ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವನಿ ಗ್ರಾಮದ ದೇವೀರಮ್ಮ (75) ಸೊಸೆಯಿಂದಲೇ ಕೊಲೆಯಾದ ಅತ್ತೆ. ಅಶ್ವಿನಿ(34) ಕೊಲೆ ಮಾಡಿದ ಸೊಸೆ. ಮೃತರ ಮಗಳು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸುವ ಮೂಲಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಅಶ್ವಿನಿ ಅದೇ ಗ್ರಾಮದ ಆಂಜನೇಯ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಜೊತೆಗೆ ತನ್ನ ಅತ್ತೆಯ ಬೀರುವಿನಲ್ಲಿದ್ದ ಬಂಗಾರ ಹಾಗೂ ನಗದನ್ನು ಆಂಜನೇಯನಿಗೆ ನೀಡಿದ್ದರು. ತನ್ನ ಬೀರುವಿನಲ್ಲಿದ್ದ ಬಂಗಾರ ಹಾಗೂ ನಗದು ಕಡಿಮೆಯಾಗುತ್ತಿರುವುದು ದೇವಿರಮ್ಮ ಅವರ ಗಮನಕ್ಕೆ ಬಂದಿತ್ತು. ಈ ವಿಷಯ ಹೊರ ಬಂದರೆ ಕಷ್ಟ ಎನ್ನುವ ಕಾರಣಕ್ಕೆ ಅಶ್ವಿನಿ ತನ್ನ ಪ್ರಿಯಕರನೊಂದಿಗೆ ಸೇರಿ ಆ. 10ರಂದು ರಾತ್ರಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಡುವ ಮೂಲಕ ಅತ್ತೆ ದೇವಿರಮ್ಮ ಅವರನ್ನು ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಮುದ್ದೆಯೊಂದಿಗೆ ಅರಿವಿಲ್ಲದೆ ನಿದ್ರೆ ಮಾತ್ರೆ ಸೇವಿಸಿದ ದೇವಿರಮ್ಮ ಅವರಿಗೆ ತಡರಾತ್ರಿ ವಾಂತಿ ಆರಂಭಗೊಂಡಿತ್ತು. ಕೂಡಲೇ ಅಶ್ವಿನಿ ಅತ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಾಗಿ ದಾವಣಗೆರೆಗೆ ತೆರಳಿದ್ದಾರೆ. ಅಲ್ಲಿಯೂ ಸಹ ವಿಳಂಬ ಮಾಡಿದ್ದರಿಂದಾಗಿ ದೇವಿರಮ್ಮ ದಾವಣಗೆರೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಆಗ ಸೊಸೆ ಅಶ್ವಿನಿ ತನ್ನ ಅತ್ತೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಸಾರ್ವಜನಿಕರು ಹಾಗೂ ಸಂಬಂಧಿಕರ ಬಳಿ ಹೇಳಿಕೊಂಡು ಆ. 11ರಂದು ದೇವಿರಮ್ಮ ಅವರ ಅಂತ್ಯ ಸಂಸ್ಕಾರ ಮಾಡಿದ್ದರು.
ಆದರೆ ಮೃತರ ಮಗಳು ತನ್ನ ತಾಯಿಯ ಬಿರುವಿನಲ್ಲಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 65 ಸಾವಿರ ರೂ. ನಗದು ಕಳವಾಗಿರುವ ಬಗ್ಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಆ. 20ರಂದು ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ವೇಳೆ ಅಶ್ವಿನಿಯೇ ತನ್ನ ಪ್ರಿಯಕರ ಆಂಜನೇಯನೊಂದಿಗೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು.
ಈ ಹಿನ್ನೆಲೆಯಲ್ಲಿ ದೇವಿರಮ್ಮ ಅವರ ಶವವನ್ನು ಹೊರ ತೆಗೆದು ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಇನ್ನು ದೇವಿರಮ್ಮ ಅವರ ಬೀರುವಿನಿಂದ ಅಶ್ವಿನಿ ಚಿನ್ನಾಭರಣ ಕದ್ದು ಆಂಜನೇಯನಿಗೆ ನೀಡಿದ್ದು, ಈ ಬಂಗಾರದ ಆಭರಣಗಳನ್ನು ಆತ ಕೆಲ ಬ್ಯಾಂಕ್ ನಲ್ಲಿ ಇಟ್ಟಿರುವುದು ತನಿಖೆ ವೇಳೆ ಗೊತ್ತಾಗಿದೆ. ಹೀಗಾಗಿ ಸೋಮವಾರ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ವಿವರಿಸಿದರು.
ದನಗಳ್ಳರ ಬಂಧನ
ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಬಂದು ದನಗಳ್ಳತನ ಮಾಡುತ್ತಿದ್ದ ಪ್ರಕರಣಗಳು ಕಂಡುಬಂದಿದ್ದವು. ಹೀಗಾಗಿ ದನಗಳ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಈ ತಂಡ ಇದೀಗ ಐವರು ದನಗಳ್ಳರನ್ನು ಬಂಧಿಸಿದೆ ಎಂದು ಎಸ್ ಪಿ ವಿಕ್ರಮ ಅಮಟೆ ತಿಳಿಸಿದರು.
ಆ. 10ರಂದು ಕಳಸ ಪಿಎಸ್ಐ ಬಲಿಗೆ ಚೆಕ್ ಪೋಸ್ಟ್ ಬಳಿ ಕ್ಸೈಲೋ ಕಾರಿನಲ್ಲಿ ನಾಲ್ಕು ದನಗಳನ್ನು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕಾಗಮಿಸಿ ವಾಹನ ತಡೆಯಲು ಯತ್ನಿಸಿದ್ದರು. ಆಗ ಕಾರನ್ನು ನಿಲ್ಲಿಸದ ಆರೋಪಿಗಳು ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದರು. ಪೊಲೀಸರು ಕಾರನ್ನು ಹಿಂಬಾಲಿಸಿ ಹೋದಾಗ ದನಗಳರು ಕಾರನ್ನು ಸ್ವಲ್ಪ ದೂರದಲ್ಲಿಯೇ ಬಿಟ್ಟು ಓಡಿ ಹೋಗಿದ್ದರು.
ಕಾರಿನಲ್ಲಿದ್ದ ನಾಲ್ಕು ದನಗಳನ್ನು ರಕ್ಷಿಸಿದ ಪೊಲೀಸರು ಕಾರಿನಲ್ಲಿದ್ದ ಮೂರು ಮೊಬೈಲ್ ಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿ ಭದ್ರಾವತಿ ತಾಲೂಕಿನ ಐವರು ಅಂತರ ಜಿಲ್ಲಾ ದನಗಳ್ಳರನ್ನು ಬಂಧಿಸಿದ್ದಾರೆ ಎಂದರು.
ಭದ್ರಾವತಿ ತಾಲೂಕಿನ ಸಲ್ಮಾನ್ ಖಾನ್, ಸಾಹಿಲ್, ಸೈಯದ್ ತೌಫಿಕ್, ಅಬ್ದುಲ್ ಅಜೀಜ್, ಅಬ್ದುಲ್ ಜಾವೇದ್ ಎಂಬುವರನ್ನು ಬಂಧಿಸಲಾಗಿದೆ. ಇವರು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ ದನಗಳ್ಳತ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.