

ಹರಪನಹಳ್ಳಿ: ಪಟ್ಟಣದ ಹೊರವಲಯದಲ್ಲಿ ಬುಧವಾರ ನಡೆದ ದೊಡ್ಡ ಮೈಲಾರಲಿಂಗೇಶ್ವರ ಕಾರಣಿಕೋತ್ಸವದಲ್ಲಿ ಗೊರವಯ್ಯ ಕೋಟೆಪ್ಪ ‘ಮುತ್ತಿನ ರಾಶಿಗೆ ಮಂಜು ಮುಸುಕಿತಲೇ ಪರಾಕ್’ ಎಂದು ದೈವವಾಣಿ ನುಡಿದರು.
ಹುಲಿಕಟ್ಟಿ ರಸ್ತೆಯಲ್ಲಿರುವ ದೊಡ್ಡ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಢಮರುಗದ ನೀನಾದ, ಚಾಟಿ ಸದ್ದು, ಪ್ರಜ್ವಲಿಸುತ್ತಿದ್ದ ದೀವಟಿಗೆ, ಬೆತ್ತ, ಸರಪಳಿ, ನೂರಾರು ಗೊರವಪ್ಪರು, ಸಾವಿರಾರು ಭಕ್ತರ ಏಳು ಕೋಟಿ ಏಳು ಕೋಟಿ ಚಹಾಂಗ್ ಬಲೋ ಜಯ ಘೋಷಣೆ ಭಕ್ತಿಯ ಪರಾಕಾಷ್ಠೆ ತಲುಪುವಂತೆ ಮಾಡಿ ಮೈಲಾರ ಲಿಂಗೇಶ್ವರ ಜಾತ್ರೆಗೆ ಮೆರುಗು ನೀಡಿತು.
ಒಂಬತ್ತು ದಿವಸ ಉಪವಾಸ ವ್ರತ ಆಚರಿಸಿದ್ದ ಗೊರವಯ್ಯ ಕೋಟೆಪ್ಪ ಅವರನ್ನು ಪಾದಗಟ್ಟಿಯ ಮರಡಿಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಗೊರವಯ್ಯ ಸಂಜೆ 5.45ಕ್ಕೆ ಬಿಲ್ಲನ್ನೇರಿ ಸದ್ದಲೇ ಎನ್ನುತ್ತಿದ್ದಂತೆ ನೆರೆದವರೆಲ್ಲ ನಿಶ್ಯಬ್ದವಾದರು, ಬಳಿಕ ಕಾರಣಿಕ ನುಡಿದು ಬೀಳುತ್ತಿದ್ದ ಕೋಟೆಪ್ಪರನ್ನು ಗೊರವ ಸಮೂಹ ಎತ್ತಿ ಹಿಡಿದರು.
ಪ್ರಸಕ್ತ ವರ್ಷದ ಉತ್ತಮ ಮಳೆ ಹಾಗೂ ಸಮೃದ್ಧ ಫಸಲು ಬರುತ್ತದೆ. ಆದರೆ ಕೆಲ ಮಳೆಗಳು ಬಾರದೆ ಬೆಳೆ ಕುಂಠಿತವಾಗುತ್ತದೆ ಎಂಬುದು ಕಾರಣಿಕವನ್ನು ವಿಶ್ಲೇಷಿಸಲಾಯಿತು.