

ಮೈಸೂರು: ಮಾಜಿ ಸೈನಿಕರು, ಸ್ವಾತಂತ್ರೃ ಯೋಧರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಬಿಡಿ ನಿವೇಶನ ಹಂಚಿಕೆ ಮಾಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಅರ್ಜಿ ಆಹ್ವಾನಿಸಿದೆ.
ದೇವನೂರು 3ನೇ ಹಂತದ ಬಡಾವಣೆಯಲ್ಲಿರುವ 188 ನಿವೇಶನಗಳು ಹಂಚಿಕೆಗೆ ಲಭ್ಯ ಇವೆ. 99, 912, 1218, 1524 ಮೀಟರ್ ಅಳತೆಯ ತಲಾ 47 ನಿವೇಶನಗಳಿವೆ ಎಂದು ಮುಡಾ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ನಿವಾಸಿಯಾಗಿ ಕ್ರೀಡೆ, ಕಲೆ, ವಿಜ್ಞಾನ, ಸಾಹಿತ್ಯ, ವೈದ್ಯಕೀಯ, ಸಾರ್ವಜನಿಕ ಆಡಳಿತದಲ್ಲಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಮಾನ್ಯತೆ ಪಡೆದ ವ್ಯಕ್ತಿಗಳು, ಮಾಜಿ ಸೈನಿಕರು, ಸೈನಿಕ ಸಿಬ್ಬಂದಿ, ಮುಡಾ ವ್ಯಾಪ್ತಿಯ ವಾಸವಿರುವ ಸ್ವಾತಂತ್ರೃ ಯೋಧರು, ಮೃತ ಸರ್ಕಾರಿ ನೌಕರರ ಅವಲಂಬಿತರು ಅರ್ಜಿ ಸಲ್ಲಿಸಲು ಅರ್ಹರು. ಇದಕ್ಕೆ ಸಂಬಂಧಿಸಿದ ದಾಖಲೆ ನೀಡಬೇಕು ಎಂದು ತಿಳಿಸಿದರು.
ಅರ್ಜಿ ಶುಲ್ಕ 500 ರೂ., ನೋಂದಣಿ ಶುಲ್ಕ 1,000 ರೂ.ಪಾವತಿಸಿ ಬ್ಯಾಂಕ್ ಆಫ್ ಬರೋಡದ ಎಲ್ಲ ಜಿಲ್ಲೆಯ ಮುಖ್ಯ ಶಾಖೆಯಲ್ಲಿ ಫೆ.12ರಿಂದ 28ರೊಳಗೆ ಅರ್ಜಿ ಪಡೆದುಕೊಳ್ಳಬಹುದು ಎಂದರು.
ನಿವೇಶನದ ಮೊತ್ತದ ಶೇ.10ರಷ್ಟು ಮುಂಗಡ ಠೇವಣಿಯನ್ನು(ಇಎಂಡಿ) ಅರ್ಜಿಯೊಂದಿಗೆ ಪಾವತಿಸಬೇಕು. 69 ಮೀ. ಅಳತೆಯ ನಿವೇಶನದ ದರ 5.23 ಲಕ್ಷ ರೂ. ಮೊತ್ತಕ್ಕೆ 52,300 ಇಎಂಡಿ, 912 ಮೀ.ಅಳತೆಯ ನಿವೇಶನದ ದರ 40.46 ಲಕ್ಷ ರೂ.ಮೊತ್ತಕ್ಕೆ 1,04,600 ರೂ. ಪಾವತಿಸಬೇಕು. ಅಂತೆಯೆ, 1218 ಮೀ.ಅಳತೆಯ ನಿವೇಶನದ ದರ 20.92 ಲಕ್ಷ ರೂ.ಮೊತ್ತಕ್ಕೆ 2,09,200 ರೂ. ಇಎಂಡಿ, 1524 ಮೀ. ಅಳತೆ ನಿವೇಶನದ 34.86 ಲಕ್ಷ ರೂ.ಮೊತ್ತಕ್ಕೆ 3,48,600 ರೂ. ಇಎಂಡಿ ಪಾವತಿಸಬೇಕಾಗುತ್ತದೆ ಎಂದರು.
ಭರ್ತಿ ಮಾಡಿದ ಅರ್ಜಿ, ಪ್ರಾರಂಭಿಕ ಠೇವಣಿಯನ್ನು ಮುಡಾ ಆಯುಕ್ತರ ಹೆಸರಿನಲ್ಲಿ ಡಿಡಿ, ಪೇ ಆರ್ಡರ್ ಲಗತ್ತಿಸಿ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಫೆ.28ರ ಒಳಗೆ ಸಲ್ಲಿಸಿ ಸ್ವೀಕೃತ ಪಡೆದುಕೊಳ್ಳಬೇಕು. ಠೇವಣಿಗೆ ಬಡ್ಡಿ ನೀಡುವುದಿಲ್ಲ. ಆಯ್ಕೆಯಾದವರಿಗೆ ನಿವೇಶನದ ಮೊಬಲಗಿಗೆ ಸರಿಹೊಂದಿಸಿಕೊಳ್ಳಲಾಗುವುದು. ಆಯ್ಕೆಯಾಗದ ಅರ್ಜಿದಾರರಿಗೆ ಹಿಂದುರಿಸಲಾಗುವುದು ಎಂದು ತಿಳಿಸಿದರು.