ಮುಡಾಕ್ಕೆ ಪಂಚತಾರಾ ಹೋಟೆಲ್, ಶಾಂಪಿಂಗ್ ಕಾಂಪ್ಲೆಕ್ಸ್ ಬೇಕಿತ್ತಾ...?

mysore
Published on

ಮೈಸೂರು: ವಸತಿ ಬಡಾವಣೆಗಳೊಂದಿಗೆ ಕ್ರೀಡಾ ಸಂಕೀರ್ಣ, ಪಂಚತಾರಾ ಹೋಟೆಲ್, ಮಿತ್ರ ಭೂ ಉಪಯೋಗದ ಬಡಾವಣೆ(ವಸತಿ ಮತ್ತು ವಾಣಿಜ್ಯ), ಶಾಂಪಿಂಗ್ ಕಾಂಪ್ಲೆಕ್ಸ್, ಮಲಿನ ನೀರಿನ ಶುದ್ಧೀಕರಣ ಘಟಕಗಳ ನಿರ್ಮಾಣ...

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2025-26ನೇ ಸಾಲಿನ ಆಯವ್ಯಯದ ಸಾರಾಂಶವಿದು. ಮುಡಾದ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಅಧ್ಯಕ್ಷತೆಯಲ್ಲಿ ಆಯುಕ್ತ ಎ.ಎನ್.ರಘುನಂದನ್ ಅವರು ಬಜೆಟ್ ಮಂಡಿಸಿದರು.

ಮುಡಾ ಪ್ರಕರಣದಿಂದ ಸೊರಗಿರುವ ಪ್ರಾಧಿಕಾರವು ಇದಕ್ಕೆ ಚಿಕಿತ್ಸೆ ನೀಡಲು ಮುಂದಾಗಿಲ್ಲ. ಬದಲಿಗೆ ಏನು ಆಗಿಲ್ಲ ಎಂಬಂತೆ ಜಾಣ ನಡೆ ಪ್ರದರ್ಶಿಸಿದೆ. ಗಂಭೀರವಾಗಿರುವ 50:50 ಅನುಪಾತದ ನಿವೇಶನ ಹಂಚಿಕೆ ಪ್ರಕರಣ ಸೇರಿದಂತೆ ಇನ್ನಿತರ ನಿಯಮಬಾಹಿರ ವಿಷಯಗಳನ್ನು ಪ್ರಸ್ತಾಪಿಸಿಲ್ಲ. ಹೊಸ ಆದಾಯ ಮೂಲ ಕಂಡುಕೊಳ್ಳಲು ವಾಣಿಜ್ಯ ಚಟುವಟಿಕೆಗಳತ್ತ ಚಿತ್ತ ಹರಿಸಿದೆ. ಬಡಾವಣೆ ರಚನೆಗಾಗಿ ಹಣ ಸಹ ಇಟ್ಟಿದೆ.

ಮಲಿನ ನೀರಿನ ಶುದ್ಧೀಕರಣ ಘಟಕ:

ಅಯ್ಯಜಯ್ಯನ ಹುಂಡಿ ಮತ್ತು ಕೇರ್ಗಳ್ಳಿ ಕೆರೆಗಳ ಪಕ್ಕದಲ್ಲಿ ಮಲಿನ ನೀರಿನ ಶುದ್ಧೀಕರಣ ಘಟಕಗಳ ನಿರ್ಮಾಣಕ್ಕೆ ಉದ್ದೇಶಿಸಿದ್ದು, ಈ ಮೂಲಕ ಕೆರೆಗಳಿಗೆ ಸುತ್ತಲಿನ ಪ್ರದೇಶಗಳಿಂದ ಬರುತ್ತಿರುವ ತ್ಯಾಜ್ಯ ನೀರಿನ್ನು ತಡೆಯಲಾಗುತ್ತಿದೆ. ಈ ಕಾಮಗಾರಿಗಾಗಿ 24.80 ಕೋಟಿ ರೂ. ಕಾಯ್ದಿರಿಸಲಾಗಿದೆ.

ಕೆರೆಗಳ ಅಭಿವೃದ್ಧಿ:

ದಳವಾಯಿ ಕೆರೆಗೆ 15 ಕೋಟಿ ರೂ., ಕುಕ್ಕರಹಳ್ಳಿ ಕೆರೆಗೆ 10 ಕೋಟಿ ರೂ. ಮತ್ತು ಇತರ ಕೆರೆಗಳನ್ನು ಅಭಿವೃದ್ಧಿಪಡಿಸಲು 15 ಕೋಟಿ ರೂ. ಮೀಸಲಿಡಲಾಗಿದೆ. ಜತೆಗೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಸಹಯೋಗದಲ್ಲಿ ಅಧಿಸೂಚಿತ ಸ್ಲಂಗಳ ಅಭಿವೃದ್ಧಿಗಾಗಿ 75 ಲಕ್ಷ ರೂ. ನಿಗದಿಪಡಿಸಲಾಗಿದೆ.

ಕುಕ್ಕರಹಳ್ಳಿ ಕೆರೆಯ ಹತ್ತಿರ ಲಾಲ್‌ಬಾಗ್ ಉದ್ಯಾನ ಅಭಿವೃದ್ಧಿಪಡಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 2 ಕೋಟಿ ರೂ. ಕಾಯ್ದಿರಿಸಲಾಗಿದೆ. ಜತೆಗೆ ಮುಡಾ ನಿರ್ಮಿಸಿರುವ ಬಡಾವಣೆಗಳಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು 15 ಕೋಟಿ ರೂ. ಬಜೆಟ್‌ನಲ್ಲಿ ಎತ್ತಿಡಲಾಗಿದೆ.

ಮುಡಾ ಮೂಲ ಉದ್ದೇಶವಾಗಿರುವ ವಸತಿ ಬಡಾವಣೆಗಳ ಅಭಿವೃದ್ಧಿ ಆದ್ಯತೆ ನೀಡಿದ್ದು, ನಂಜನಗೂಡು ವ್ಯಾಪ್ತಿಯಲ್ಲಿ ರೈತರಿಂದ ನೇರವಾಗಿ ಭೂಮಿ ಖರೀದಿಸಿ ವಸತಿ ಬಡಾವಣೆ ರಚಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 100 ಕೋಟಿ ರೂ. ಕಾಯ್ದಿರಿಸಲಾಗಿದೆ.

ವಿಜಯಶ್ರೀಪುರದಲ್ಲಿ ಪಂಚತಾರಾ ಹೋಟೆಲ್:

ದಶಕಗಳಿಂದ ಭೂ ವಿವಾದದಿಂದ ತತ್ತರಿಸಿರುವ ವಿಜಯಶ್ರೀಪುರದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗುತ್ತಿದೆ. 14 ಎಕರೆ ವಿಸ್ತೀರ್ಣದಲ್ಲಿ 10 ಕೋಟಿ ರೂ. ಮಿಶ್ರ ಭೂ ಉಪಯೋಗದ ಬಡಾವಣೆ(ವಸತಿ ಮತ್ತು ವಾಣಿಜ್ಯ) ನಿರ್ಮಾಣ ಚಿಂತಿಸಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ)ದಲ್ಲಿ 5 ಎಕರೆಯಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣ, 3 ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ತಿರ್ಮಾನಿಸಲಾಗಿದೆ.

ವಿಜಯನಗರದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್:

ಹಿನಕಲ್ ವ್ಯಾಪ್ತಿಯ 4 ಎಕರೆಯಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿ ಮಿಶ್ರ ಭೂ ಉಪಯೋಗದ ಬಡಾವಣೆ(ವಸತಿ ಮತ್ತು ವಾಣಿಜ್ಯ) ನಿರ್ಮಾಣ, ವಿಜಯನಗರದ 3ನೇ ಹಂತದ ‘ಎ’ ಬ್ಲಾಕ್‌ನಲ್ಲಿ 5 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಸ್ಥಾಪಿಸಲಾಗುತ್ತಿದೆ. ತುಂಡು ಭೂಮಿಯಲ್ಲೇ ಬಡಾವಣೆ ರಚಿಸಲು ಮತ್ತು ವಿಸ್ತರಣೆಗೆ ಮುಡಾ ಕ್ರಮ ತೆಗೆದುಕೊಂಡಿದ್ದು, ವಿಜಯನಗರ 4ನೇ ಹಂತ 2ನೇ ಘಟ್ಟ ಬಡಾವಣೆಯ ಬಸವನಹಳ್ಳಿಯಲ್ಲಿ 4.21 ಎಕರೆ ಪ್ರದೇಶದಲ್ಲಿ ಬಡಾವಣೆ ರಚಿಸಲು 2 ಕೋಟಿ ರೂ., ಇದೇ ಬಸವನಹಳ್ಳಿಯ 3.20 ಎಕರೆ ವಿಸ್ತೀರ್ಣದಲ್ಲಿ ಬಡಾವಣೆ ರಚನೆಗಾಗಿ 5 ಕೋಟಿ ರೂ., ಬೋಗಾದಿ ಗ್ರಾಮದ 2 ಎಕರೆಯಲ್ಲಿ ವಸತಿ ಬಡಾವಣೆಗಾಗಿ 4 ಕೋಟಿ ರೂ., ದೇವನೂರು ಗ್ರಾಮದ 4 ಎಕರೆಯಲ್ಲಿ ಬಡಾವಣೆ ರಚಿಸಲು 4 ಕೋಟಿ ರೂ., ದಟ್ಟಗಳ್ಳಿಯ 5.30 ಎಕರೆ ಪ್ರದೇಶದಲ್ಲಿ ಬಡಾವಣೆ ರಚಿಸಲು 5 ಕೋಟಿ ರೂ. ಕಾಯ್ದಿರಿಸಲಾಗಿದೆ.

ವಿಜಯನಗರ 4ನೇ ಹಂತದಲ್ಲಿ 3ನೇ ಘಟ್ಟ ಬಡಾವಣೆಯಲ್ಲಿ 9 ಎಕರೆಯಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 15 ಕೋಟಿ ರೂ. ತೆಗೆದಿಡಲಾಗಿದೆ. ಅರೆಬರೆಯಾಗಿರುವ ಅಂಬೇಡ್ಕರ್ ಭವನದ ಕಟ್ಟಡದ ಉಳಿಕೆ ಕಾಮಗಾರಿಗಾಗಿ 23.84 ಕೋಟಿ ರೂ. ಮೀಸಲಿಡಲಾಗಿದೆ.

ಔಟರ್ ರಿಂಗ್ ರೋಡ್ ಮತ್ತೆ ಪ್ರಸ್ತಾಪ:

ಈ ಸಲವೂ ಹೊರಪರಧಿ ರಸ್ತೆ ಪ್ರಸ್ತಾಪಿಸಲಾಗಿದೆ. ಈ ರಸ್ತೆಯು ಅರಣ್ಯ ಪ್ರದೇಶದಿಂದ ಮುಕ್ತವಾಗಿದ್ದು, ಪ್ರಸಕ್ತ 105.31 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. 45 ಮೀಟರ್ ಅಗಲದ ರಸ್ತೆಯಲ್ಲಿ 3+3 ಮುಖ್ಯ ಲೈನ್, 2 ಸರ್ವಿಸ್ ಲೈನ್‌ಗಳೂ ಇರಲಿವೆ. ಡಿಪಿಆರ್ ತಯಾರಿಸಲು 7.75 ಕೋಟಿ ರೂ. ನೀಡಲಾಗಿದೆ.

ಆದಾಯ, ವೆಚ್ಚ ಪರಿಷ್ಕರಣೆ:

ಮುಕ್ತಾಯ ಅಂತ್ಯಕ್ಕೆ ಬಂದಿರುವ 2024-25ನೇ ಆರ್ಥಿಕ ವರ್ಷದಲ್ಲಿ 837.18 ಕೋಟಿ ರೂ.ಗೆ ಆದಾಯ, 686.07 ಕೋಟಿ ರೂ.ಗೆ ವೆಚ್ಚವನ್ನು ಪರಿಷ್ಕರಿಸಲಾಗಿದೆ. ನಿಶ್ಚಿತ ಠೇವಣಿ ರೂಪದಲ್ಲಿ ಇಡಿಗಂಟು ಇಟ್ಟಿರುವ ಮೂಲ, ವಾರ್ಷಿಕ ಬಡ್ಡಿಯಿಂದ 318.85 ಕೋಟಿ ರೂ. ಬರುವ ನಿರೀಕ್ಷೆ ಇದೆ.

871 ಕೋಟಿ ರೂ. ಆದಾಯ ನಿರೀಕ್ಷೆ:

2025-26ನೇ ಸಾಲಿನಲ್ಲಿ ಸಂಪನ್ಮೂಲಗಳ ಎಲ್ಲ ಮೂಲಗಳಿಂದ 871.54 ಕೋಟಿ ರೂ. ಆದಾಯ ಸಂಗ್ರಹ ನಿರೀಕ್ಷೆ ಇದೆ. 548.49 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ.

ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ದಸರಾ ವಂತಿಕೆ ಸೇರಿದಂತೆ ಆಡಳಿತ-ವೇತನಕ್ಕಾಗಿ 54.38 ಕೋಟಿ ರೂ., ಮಹಾಯೋಜನೆಯ ಪರಿಷ್ಕಣೆಗಾಗಿ 4 ಕೋಟಿ ರೂ., ಮುಡಾದ ಆಸ್ತಿ ಸಂರಕ್ಷಣೆಗಾಗಿ 9.72 ಕೋಟಿ ರೂ., ಕೆರೆಗಳ ಅಭಿವೃದ್ಧಿಗಾಗಿ 40 ಕೋಟಿ ರೂ., ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 1.36 ಕೋಟಿ ರೂ., ಅಭಿವೃದ್ಧಿ ನಿಧಿ-1ರಡಿ ಗುಂಪು ವಸತಿ ಮನೆಗಳ ನಿರ್ಮಾಣ, ಉದ್ಯಾನ, ಮೂಲಸೌಕರ್ಯ ಅಭಿವೃದ್ಧಿ, ಭೂಸ್ವಾಧೀನ ಪರಿಹಾರ ವೆಚ್ಚಕ್ಕೆ 322.21 ಕೋಟಿ ರೂ. ಅಭಿವೃದ್ಧಿ ನಿಧಿ-2ರಡಿ ಕಾಮಗಾರಿ ನಿರ್ವಹಣೆಗಾಗಿ 42 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ನಿಧಿ-4ರಡಿಯಲ್ಲಿ ಉದ್ಯಾನ-ತೆರದ ಪ್ರದೇಶಗಳ ಅಭಿವೃದ್ಧಿಗಾಗಿ ಯಾವುದೇ ಕಾಮಗಾರಿ ಪ್ರಸ್ತಾಪಿಸಿಲ್ಲ.

ಶಾಸಕರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಟಿ.ಎಸ್.ಶ್ರೀವತ್ಸ, ದರ್ಶನ್ ಧ್ರುವನಾರಾಯಣ, ಕೆ.ಹರೀಶ್‌ಗೌಡ, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕೆ.ವಿವೇಕಾನಂದ, ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net