

ಮೈಸೂರು: ನಿವೇಶನ ಹಂಚಿಕೆ ಪ್ರಕರಣ ಕುರಿತು ತನಿಖೆ ನಡೆಸಿದ ನ್ಯಾ.ಪಿ.ಎನ್.ದೇಸಾಯಿ ಏಕಸದಸ್ಯ ವಿಚಾರಣಾ ಆಯೋಗದ ಖರ್ಚು ವೆಚ್ಚವನ್ನು ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಎಡಿ) ಭರಿಸಿದೆ.
ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಇದು ವರದಿ ನೀಡಿತ್ತು. ಜತೆಗೆ, ಸಿಎಂ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿತ್ತು.
ನಿವೇಶನ ಹಂಚಿಕೆಯಲ್ಲಿ ಅಕ್ರಮ ಎಸಗಿರುವ ಅಧಿಕಾರಿಗಳು ಮತ್ತು ಅಕ್ರಮ ನಿವೇಶನದಾರರ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳುವ ಜತೆಗೆ, ಎಂಎಡಿಗೆ ಉಂಟಾಗಿರುವ ಆರ್ಥಿಕ ನಷ್ಟ ವಸೂಲಿಗೆ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಶಿಫಾರಸು ಮಾಡಿತ್ತು. ಇದರ ಅನುಷ್ಠಾನಕ್ಕೆ ಇತ್ತೀಚಿಗೆ ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪರ್ಯಾಯ ನಿವೇಶನ ಪಡೆದ ಆರೋಪ ಮತ್ತು ಮುಡಾದಲ್ಲಿ ದೊಡ್ಡ ಪ್ರಮಾಣದಲ್ಲಿ ಇತರ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 2024ರ ಜುಲೈನಲ್ಲಿ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾ.ಪಿ.ಎನ್.ದೇಸಾಯಿ ಏಕ ಸದಸ್ಯ ವಿಚಾರಣಾ ಆಯೋಗ ನೇಮಿಸಲಾಗಿತ್ತು.
ಆಯೋಗವು 2006ರಿಂದ 2024ರ ಜು.15ರವರೆಗಿನ 19 ವರ್ಷಗಳ ಅವಧಿಯಲ್ಲಿ ಮುಡಾದಲ್ಲಿ ನಡೆದಿರುವ ನಿವೇಶನಗಳ ಹಂಚಿಕೆ ಕುರಿತು ಪರಿಶೀಲನೆ ನಡೆಸಿ, 2025ರ ಜುಲೈ 31ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಬೆಂಗಳೂರಿನ ಕುಮಾರಕೃಪಾ ಸರ್ಕಾರಿ ಅತಿಥಿಗೃಹದಲ್ಲಿ ಕಚೇರಿ ತೆರೆದು ಕಾರ್ಯನಿರ್ವಹಣೆ ಮಾಡಿತ್ತು. ಅಗತ್ಯ ಸಿಬ್ಬಂದಿ, ಕಂಪ್ಯೂಟರ್, ಲ್ಯಾಪ್‌ಟಾಪ್ ಸೇರಿದಂತೆ ವಿವಿಧ ಉಪಕರಣಗಳು, ಪೀಠೋಪಕರಣಗಳನ್ನು ಎಂಎಡಿಯಿಂದಲೇ ಒದಗಿಸಲಾಗಿತ್ತು. ಇದೀಗ ಆಯೋಗ ತನಿಖೆ ಪೂರ್ಣಗೊಂಡಿದೆ.
ಆಯೋಗದ ಕಚೇರಿಗೆ ಭೇಟಿ ನೀಡಿದ್ದ ಎಂಎಡಿ ಅಧಿಕಾರಿಗೆ ಈ ವಸ್ತುಗಳೆಲ್ಲವನ್ನೂ ಹಸ್ತಾಂತರಿಸಲಾಗಿದೆ. ಅಲ್ಲಿಂದ ತಂದು ನಗರದ ಎಂಎಡಿ ದಾಸ್ತಾನು ಕೊಠಡಿಯಲ್ಲಿ ಇಡಲಾಗಿದೆ.
ಆಯೋಗದ ಸಿಬ್ಬಂದಿ ಸಂಬಳ, ಭತ್ಯೆ, ನಿತ್ಯ ಖರ್ಚು, ಅತಿಥಿಗೃಹ ಬಾಡಿಗೆ, ವಿದ್ಯುತ್ ಬಿಲ್, ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳ ನಿರ್ವಹಣಾ ವೆಚ್ಚ ಸೇರಿದಂತೆ 5 ಕೋಟಿ ರೂ. ಖರ್ಚಾಗಿದೆ. ಇದನ್ನು ಎಂಎಡಿ ಪಾವತಿಸಿದೆ ಎಂದು ಮೂಲಗಳು ತಿಳಿಸಿವೆ.