ಮುಡಾ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಯತ್ನ:ಎಚ್.ಕೆ.ಸುರೇಶ್

ಮುಡಾ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಯತ್ನ:ಎಚ್.ಕೆ.ಸುರೇಶ್
Published on

ಹಾಸನ: ಸರ್ಕಾರ ಜಾತಿ ಗಣತಿ ಸ್ವೀಕಾರ ಮಾಡುವ ವಿಚಾರವನ್ನು ಮುನ್ನಲೆಗೆ ತರುವ ಮೂಲಕ ಮುಡಾ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ ಎಂದು ಶಾಸಕ ಎಚ್.ಕೆ.ಸುರೇಶ್ ಅವರು ಆರೋಪಿಸಿದರು.
ಮುಡಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ವಿಚಾರ ಚರ್ಚೆಯಾಗುತ್ತಿದ್ದಂತೆ ಜಾತಿ ಗಣತಿ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಗಣತಿ ಜಾರಿ ಮಾಡಲು ಆಸಕ್ತಿ ಇಲ್ಲ. ವೈಜ್ಞಾನಿಕವಾಗಿ ಜಾತಿ ಗಣತಿ ಅಂಗೀಕರಿಸಿದರೆ ನಮ ತಕರಾರಿಲ್ಲ. ಸರ್ಕಾರದ ಒಬ್ಬೊಬ್ಬ ಸಚಿವರದ್ದು ಒಂದೊಂದು ರೀತಿಯ ಹೇಳಿಕೆಗಳು ಬರುತ್ತಿವೆ. ಕೆಲವರು ಸಚಿವ ಸಂಪುಟದಲ್ಲಿ ಚರ್ಚೆಯಾಗಲಿ ಅಂದರೆ ಮತ್ತೆ ಕೆಲವರು ಅಧಿವೇಶನದಲ್ಲಿ ಚರ್ಚಿಸೋಣ ಎನ್ನುತ್ತಾರೆ. ಮುಖ್ಯಮಂತ್ರಿ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಳ್ಳುತ್ತಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ ಅಷ್ಟೇ. ಅಭಿವೃದ್ಧಿ, ಮಳೆ ಹಾನಿ ಪರಿಹಾರಕ್ಕೆ ಅನುದಾನ ನೀಡುತ್ತಿಲ್ಲ. ಜಿಲ್ಲೆಗೆ ಇಲ್ಲಿವರೆಗೆ ಒಂದು ರೂಪಾಯಿ ಅನುದಾನ ಸಿಕ್ಕಿಲ್ಲ ಎಂದು ದೂರಿದರು.
ಗ್ರಾಮ ಪಂಚಾಯಿತಿ ನೌಕರರ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ನಡೆಸಲಾಗುತ್ತಿದೆ. ಆದರೆ ಅಧಿಕಾರಿ ಹಾಗು ನೌಕರರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿದೆ. ಉದ್ಯೋಗ ಹೋಗುತ್ತದೆಂಬ ಭಯಕ್ಕೆ ನೌಕರರು ಮುಷ್ಕರ ನಿಲ್ಲಿಸುತ್ತಾರೆಂಬ ಭಾವನೆ ಸರ್ಕಾರಕ್ಕಿದೆ. ಗ್ರಾಮ ಪಂಚಾಯಿತಿ ನೌಕರರು ಯಾವ ಬೆದರಿಕೆಗೂ ಜಗ್ಗದೆ ಮುಷ್ಕರ ಮುಂದುವರಿಸಬೇಕು. ಮಗು ಅತ್ತಾಗಲೇ ತಾಯಿ ಹಾಲು ಕೊಡುತ್ತಾಳೆ. ಆದ್ದರಿಂದ ನೌಕರರು ತಮ ಅವಶ್ಯಕತೆಯನ್ನು ಸರ್ಕಾರಕ್ಕೆ ಸಾಬೀತುಪಡಿಸಬೇಕೆಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net