

ಬಳ್ಳಾರಿ : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಚಾತುರ್ಯದಿಂದ ಆಗಿರುವ ಲೋಪದೋಷವನ್ನೇ, ಬಿಜೆಪಿ ರಾಜಕೀಯ ಮಾಡುವುದು ಬಿಡಬೇಕು ಎಂದು ದೇವರಾಜ ಅರಸು ವೇದಿಕೆ ಜಿಲ್ಲಾಧ್ಯಕ್ಷ ಕಲ್ಲುಕಂಬ ಪಂಪಾಪತಿ ಹೇಳಿದರು.
ನಗರದ ಸ್ನೇಹಸಂಪುಟ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ದಾನವಾಗಿ ಬಂದಿರುವ ಜಮೀನನ್ನು ಕಾನೂನು ಪ್ರಕಾರ ಅಭಿವೃದ್ಧಿಪಡಿಸಿ ನೀಡುವಲ್ಲಿ ಅಚಾತುರ್ಯವಾಗಿ ಲೋಪದೋಷವಾಗಿದೆ. ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಬದುಕಿದ್ದಾರೆ. ಬಿಜೆಪಿಯವರು ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳುವುದು ಬೇಡ. ಮುಡಾದಲ್ಲಿ ಹಗರಣ ನಡೆದಿದೆ ಎಂದಾದರೆ, ಸಿಎಂ ಸಿದ್ದರಾಮಯ್ಯ ಈಗಾಗಲೇ ತನಿಖೆಗೆ ಆದೇಶ ನೀಡಿದ್ದು, ಅದರಲ್ಲಿ ಎಲ್ಲವೂ ಬಹಿರಂಗವಾಗಲಿದೆ. ವರದಿ ಬರುವವರೆಗೂ ಬಿಜೆಪಿಯವರು ಸುಮ್ಮನಿರುವುದು ಒಳ್ಳೆಯದು. ಇದೇ ರೀತಿ ಮುಂದುವರೆಸಿದಲ್ಲಿ ರಾಜ್ಯಾದ್ಯಂತ ಅಹಿಂದ ವರ್ಗ ಒಗ್ಗಟ್ಟಾಗಿ ಸಿಎಂ ಸಿದ್ದರಾಮಯ್ಯರ ಪರ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಮುಖಂಡರಾದ ಎಲ್.ಮಾರೆಣ್ಣ, ಜಿ.ಎಸ್.ಮಹಮ್ಮದ ಗೌಸ್, ಕುರುಬರ ಸಂಘದ ಜಿಲ್ಲಾಧ್ಯಕ್ಷ ಪಿ.ಎಲ್.ಗಾದಿಲಿಂಗನಗೌಡ ಇದ್ದರು.