

ಮೈಸೂರು: ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ 1ನೇ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ನೋಟಿಸ್ ನೀಡುವ ವಿಚಾರದಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳು ಗೌಪ್ಯತೆ ಕಾಯ್ದುಕೊಂಡಿದ್ದಾರೆ. ಸದ್ಯದಲ್ಲಿಯೇ ಸಿದ್ದರಾಮಯ್ಯ ಅವರನ್ನು ಸಹ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಈಗಾಗಲೇ ಪ್ರಕರಣ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳ ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ಮುಕ್ತಾಯಗೊಳಿಸಿದ್ದಾರೆ. ಹಾಗಾಗಿ 1ನೇ ಆರೋಪಿ ಸಿದ್ದರಾಮಯ್ಯ ಅವರನ್ನು ಯಾವಾಗ ವಿಚಾರಣೆಗೆ ಒಳಪಡಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ತನಿಖಾಧಿಕಾರಿಯಾಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಸಿದ್ದರಾಮಯ್ಯಗೆ ನೋಟಿಸ್ ನೀಡುವುದು, ಬಿಡುವುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟ ವಿಚಾರ. ನಾವು ನೋಟಿಸ್ ನೀಡಿದಾಗ ನಿಮಗೆ ಆ ವಿಷಯ ಗೊತ್ತಾಗುತ್ತದೆ. ಎಲ್ಲಿ? ಯಾವಾಗ? ಹೇಗೆ ವಿಚಾರಣೆ ಮಾಡಬೇಕು ಎಂಬ ಅಂಶಗಳನ್ನು ಆ ಕ್ಷಣಕ್ಕೆ ನಾವು ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ಇರುವ ಸ್ಥಳಕ್ಕೆ ಹೋಗಿ ತನಿಖೆ ನಡೆಸಬೇಕೇ ಅಥವಾ ಅಥವಾ ನಾವಿರುವ ಸ್ಥಳಕ್ಕೆ ಅವರನ್ನು ಕರೆಸಿಕೊಂಡು ತನಿಖೆ ನಡೆಸಬೇಕೇ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಈ ವಿಚಾರವನ್ನು ಮಾಧ್ಯಮಗಳಿಗೆ ಹೇಳುವಂತೆಯೂ ಇಲ್ಲ. ಹೆಚ್ಚಿನ ಮಾಹಿತಿ ಬೇಕಾದರೆ ಲೋಕಾಯುಕ್ತ ಎಡಿಜಿಪಿ ಅವರನ್ನು ಸಂಪರ್ಕಿಸಬಹುದು. ನಮಗಿರುವ ಮಿತಿಯಲ್ಲಿ ನಾವು ಉತ್ತರ ನೀಡಿದ್ದೇವೆ. 2, 3 ಮತ್ತು 4ನೇ ಆರೋಪಿ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ವಿಚಾರಣೆ ಮುಕ್ತಾಯಗೊಂಡಿದೆ. ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ಕಾಲ ಮಿತಿಯೊಳಗೆ ತನಿಖೆ ಮುಕ್ತಾಯಗೊಳಿಸುತ್ತೇವೆ. 30 ದಿನಗಳ ಒಳಗೆ ಬಹುತೇಕ ವಿಚಾರಣೆ ಮುಗಿಸಿದ್ದೇವೆ, ಇನ್ನೂ 60 ದಿನಗಳ ಕಾಲಕವಾಶವಿದೆ. ಕಾಲಮಿತಿಯೊಳಗೆ ತನಿಖೆ ಮುಗಿಸುವ ಪ್ರಯತ್ನದಲ್ಲಿದ್ದೇವೆ ಎಂದರು.