

ಮೈಸೂರು: ಕರ್ತವ್ಯ ಲೋಪ ಎಸಗಿರುವ ಹಿಂದಿನ ಮುಡಾ ಆಯುಕ್ತರಾಗಿದ್ದ ಡಿ.ಬಿ.ನಟೇಶ್, ಜಿ.ಟಿ.ದಿನೇಶ್‌ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳ ವಿರುದ್ಧ 15 ದಿನದೊಳಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಡಿ.19ರಂದು ಮುಡಾ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾವಂತ ನಿರುದ್ಯೋಗಿಗಳ ಸಂಘದ ಅಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ಎಚ್ಚರಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ, ಪರಿಹಾರ ನೀಡದಿರುವ ಜಮೀನುಗಳಲ್ಲಿ ಶೇ 50:50ರ ಅನುಪಾತದಲ್ಲಿ ನೀಡಿರುವ ನಿವೇಶನಗಳ ಕ್ರಯಪತ್ರ ನೋಂದಣಿ ಸ್ಥಗಿತಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ 2023ರ ಅಕ್ಟೋಬರ್‌ನಲ್ಲಿ ಆದೇಶಿಸಿದ್ದರು.
ಆದರೆ, ಈ ಇಬ್ಬರು ಆಯುಕ್ತರು, ಇತರ ಅಧಿಕಾರಿಗಳು ಇದನ್ನು ಉಲ್ಲಂಘಿಸಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಂದಿನ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಅವರು ಸಹ ಮುಡಾ ನಿವೇಶನಗಳ ಅಕ್ರಮ ಹಂಚಿಕೆಗೆ ಕಾರಣರಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರು ತಮಗೆ ಮುಡಾ ನೀಡಿದ್ದ 14 ನಿವೇಶನಗಳನ್ನು ವಾಪಸ್ ನೀಡಿದ್ದಾರೆ. ಹೀಗಾಗಿ, ಇದೇ ರೀತಿ ಇತರರು ಸಹ ಪಡೆದಿರುವ ನಿವೇಶನ ವಾಪಸ್ ಪಡೆದಲ್ಲಿ ಸುಮಾರು 4000 ನಿವೇಶನಾಕಾಂಕ್ಷಿಗಳಿಗೆ ನಿವೇಶನ ನೀಡಬಹುದಾಗಿದೆ ಎಂದು ಹೇಳಿದರು.
ಮುಡಾದ ನಿವೇಶನ ಹಂಚಿಕೆ ವೇಳೆ ಎಸ್‌ಸಿ-ಎಸ್‌ಟಿ ಅರ್ಜಿದಾರರಿಗೆ ಮೀಸಲಾತಿ ಅನುಸರಿಸಿಲ್ಲ. 1992 ಹಾಗೂ ಅದರ ಹಿಂದಿನಿಂದಲೂ ಅರ್ಜಿ ಹಾಕಿ ಕಾಯುತ್ತಿರುವವರಿಗೆ ವಂಚಿಸಿ, ಲಂಚ ನೀಡಿದವರಿಗೆ ಅಕ್ರಮವಾಗಿ ನಿವೇಶನ ನೀಡಲಾಗಿದೆ. ಮುಡಾ ಆಯುಕ್ತರೇ ರಿಯಲ್ ಎಸ್ಟೇಟ್ ಉದ್ಯಮಿಗಳ ಪರ ನಿಂತಿದ್ದಾರೆ.
ರೈತರ ಜಮೀನು ಭೂಸ್ವಾಧೀನ ಮಾಡಿಕೊಂಡ ಬಳಿಕ ಅವರಿಗೆ ಪರಿಹಾರ ನೀಡದೆ ಶೇ 50:50ರ ಅನುಪಾತದಲ್ಲಿ ಬೇಕಾದವರಿಗೆ ಬೆಲೆ ಬಾಳುವ ನಿವೇಶನ ನೀಡಲಾಗಿದೆ. ಅರ್ಜಿ ಕರೆದ ಬಳಿಕ ಮುಡಾ ಅದರಿಂದ ಬರುವ ಬಡ್ಡಿ ನುಂಗಿ ಹಾಕುತ್ತಿದೆ. ಹೀಗಾಗಿ ಈ ಕುರಿತ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.