ಮುಡಾ ವಿರುದ್ಧ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

14 A
Published on

ಮೈಸೂರು: ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿ ಕರ್ನಾಟಕ ಸೇನಾ ಪಡೆಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ಅಲ್ಲದೆ, ಸುಳ್ಳು ದಾಖಲೆ ಪತ್ರಗಳ ಮೂಲಕ 83 ವರ್ಷದ ಕೆ.ಎಸ್.ಶಿವಶಂಕರ ರಾವ್ ಅವರಿಗೆ ಸೇರಿದ ನಿವೇಶನವನ್ನು ಬೇರೆಯವರಿಗೆ ಖಾತೆ ಮಾಡಿಕೊಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
1977 ಮೇ 13ರಂದು ಸಿಐಟಿಬಿಯಿಂದ ಕೆಸರೆ ಎರಡನೇ ಹಂತದಲ್ಲಿ ನಿವೇಶನ ಸಂಖ್ಯೆ 412 (40 * 60) ನೀಡಿದ್ದು, ಮಂಜೂರಾತಿ ಪತ್ರ ಪಡೆದಿದ್ದಾರೆ. ಕೋವಿಡ್ ನಂತರ ಇವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಡೆದಾಡಲೂ ಆಗದೆ, ಹಣಕಾಸಿನ ಮುಗ್ಗಟ್ಟಾಗಿ ಈ ನಿವೇಶನ ಮಾರಲು ಟೈಟಲ್ ಡೀಡ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಸಿ ಪಡೆಯಲು ಹೋದಾಗ ಮಹಮದ್ ತಬ್ರೆಜ್ ಸನ್ ಆಫ್ ಮಹಮ್ಮದ್ ಯೂಸಫ್ ಎಂಬ ವ್ಯಕ್ತಿಯು ಇವರ ಹೆಸರಿನ ನಕಲಿ ವ್ಯಕ್ತಿಯಿಂದ ಸುಳ್ಳು ವಿಳಾಸ, ಸುಳ್ಳು ಮಾಹಿತಿ ನೀಡಿ 2020ರ ಜ. 7 ರಂದು ಸುಳ್ಳು ಜಿಪಿಎ ಸೃಷ್ಟಿಸಿಕೊಂಡು 2020ರ ಜುಲೈ 22ರಂದು ಎಚ್.ಸಿ. ರಾಧಾ ಅವರಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿದರು.
ಅಂದಿನ ಸಿಐಟಿಬಿ ನೀಡಿದ ಮಂಜೂರಾತಿ ಮೂಲಪತ್ರ ಶಿವಶಂಕರ ರಾವ್ ಅವರ ಬಳಿಯೇ ಇದ್ದರೂ ಬೇರೆಯರಿಗೆ ನೋಂದಣಿ ಮಾಡಿಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಟೈಟಲ್ ಡೀಡ್ ಕೇಳಿದರೆ ಅಧಿಕಾರಿ, ಸಿಬ್ಬಂದಿ ಸಬೂಬು ಹೇಳುತ್ತಲೇ ಇದ್ದು, ದಾಖಲೆ ಕೊಠಡಿಯಲ್ಲಿ ಸಿಗುತ್ತಿಲ್ಲ ಎನ್ನುವ ಉತ್ತರ ನೀಡಲಾಗುತ್ತಿದೆ. ಆದ್ದರಿಂದ ಹಿರಿಯರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು, ಸಾರ್ವಜನಿಕ ಕೆಲಸ ಕಾರ್ಯಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಬೇಕು ಎಂದು ಮುಡಾ ಆಯಕ್ತರಿಗೆ ಮನವಿ ಸಲ್ಲಿಸಿದರು.
ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಮುಡಾ ನಿವೃತ್ತ ಇಂಜಿನಿಯರ್ ಪಾ. ನಟರಾಜ್, ಮುಖಂಡರಾದ ಪ್ರಜೀಶ್. ಪಿ. ಕೃಷ್ಣಯ್ಯ ಸಿ.ಎಚ್. ಪ್ರಭುಶಂಕರ್, ವಿಜಯೇಂದ್ರ, ನೇಹಾ, ರಾಮಣ್ಣ, ದರ್ಶನ್ ಗೌಡ, ಅನಿಲ್, ಎಳನೀರು ರಾಮಣ್ಣ, ಗೊರೂರು ಮಲ್ಲೇಶ್, ಸಿದ್ದರಾಜು, ಪ್ರದೀಪ್, ದಿಲೀಪ್, ಬಂಗಾರಪ್ಪ, ನಂದಕುಮಾರ್, ಬಸವರಾಜು, ಗಣೇಶ್‌ಪ್ರಸಾದ್, ರವಿ ನಾಯಕ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net