

ಮೈಸೂರು: ಮುಡಾ ಪ್ರಕರಣದ ಮೂಲಕ ನೈತಿಕವಾಗಿ ಕುಗ್ಗಿಸುವ ಪ್ರಯತ್ನ ನಡೆದಿತ್ತು. ಈಗ ಅದು ನಿವಾರಣೆಯಾಗಿದೆ. ತಂದೆಗೆ ರಾಜಕೀಯವಾಗಿ ಸಹಜವಾಗಿಯೇ ಮತ್ತಷ್ಟು ಶಕ್ತಿ ಹೆಚ್ಚಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಮಾಸ್ ಲೀಡರ್. ಹೀಗಾಗಿ ಅವರನ್ನು ನೈತಿಕವಾಗಿ ಕುಗ್ಗಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಕಾರಣಕ್ಕೆ ಅವರು ಟಾರ್ಗೆಟ್ ಆಗಿದ್ದಾರೆ. ಆದರೆ ಎಲ್ಲವನ್ನೂ ಮೀರಿ ಈಗ ನಿಲ್ಲುತ್ತಿದ್ದೇವೆ ಎಂದು ಹೇಳಿದರು.
ಪಾರ್ವತಿ ಅವರಿಗೆ ಸುಪ್ರೀಂಕೋರ್ಟ್‌ನಿಂದ ರಿಲೀಫ್ ಸಿಕ್ಕಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸತ್ಯ ಮೇವ ಜಯತೇ. ಮೊದಲಿನಿಂದಲೂ ನಾವು ಇದನ್ನೇ ಹೇಳುತ್ತಿದ್ದೆವು. ಇ.ಡಿ. ರಾಜಕೀಯ ಕಾರಣಕ್ಕೆ ತನಿಖೆ ಮಾಡುತ್ತಿದೆ ಎಂಬುದು ನಮಗೆ ಗೊತ್ತಿತ್ತು. ಈಗ ನ್ಯಾಯಾಲಯ ಸಹ ಅದನ್ನೇ ಹೇಳಿದೆ.
ವಿನಾಕಾರಣ ನಮ್ಮ ತಾಯಿಯ ವಿಚಾರವನ್ನು ರಾಜಕೀಯವಾಗಿ ಎಳೆದು ತರಲಾಯಿತು. ಕೊನೆಗೂ ಕಾನೂನು ಹೋರಾಟದಲ್ಲಿ ಜಯ ಸಿಕ್ಕಿದೆ. ಈ ತೀರ್ಪಿನಿಂದ ನಮ್ಮ ತಾಯಿಗೆ ಸಮಾಧಾನ ತಂದಿದೆ. ಇದು ನಮಗೆ ಟಫ್ ಟೈಮ್ ಆಗಿರಲಿಲ್ಲ. ಆದರೆ ನಮ್ಮ ಮನಸ್ಸಿಗೆ ನೋವಾಗಿದ್ದು ಮಾತ್ರ ಸತ್ಯ. ಕಾಂಗ್ರೆಸ್ ಹೈಕಮಾಂಡ್ ಮತ್ತು ಕಾರ್ಯಕರ್ತರು ನಮ್ಮ ಪರ ಇದ್ದರು. ಹೀಗಾಗಿ ಇದರ ವಿರುದ್ಧ ಹೋರಾಟ ನಡೆಸಿದ್ದೇವೆ. ಇನ್ನಾದರೂ ಪ್ರತಿಪಕ್ಷಗಳು ಅಪಪ್ರಚಾರ ನಿಲ್ಲಿಸಲಿ ಎಂದು ಕುಟುಕಿದರು.
ನಾವು ಈ ಸಂದರ್ಭದಲ್ಲಿ 14 ಸೈಟ್ ವಾಪಸ್ ಕೇಳುವುದಿಲ್ಲ. ಆ ಸೈಟ್‌ಗಳಿಂದಲೇ ತಂದೆಯ ರಾಜಕೀಯಕ್ಕೆ ಕಪ್ಪುಚುಕ್ಕೆ ಬಂತು ಎಂಬ ನೋವು ನಮ್ಮ ತಾಯಿಗೆ ಇದೆ. ಈ ಸೈಟ್‌ಗಳಲ್ಲಿ ಮನಿ ಲಾಂಡರಿಂಗ್ ಪ್ರಶ್ನೆಯೇ ಇಲ್ಲ. ಆದರೂ ಮನಿ ಲಾಂಡರಿಂಗ್ ಕೇಸ್ ಹಾಕಿದ್ದರು. ಇದರಿಂದ ತಾಯಿ ಮನನೊಂದು ಸೈಟ್‌ಗಳನ್ನು ವಾಪಸ್ ಕೊಟ್ಟರು. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಮುಗಿಯಲಿ, ಆ ತೀರ್ಪು ಹೊರಬರಲಿ. ನಂತರ ಇದರ ಬಗ್ಗೆ ಚರ್ಚೆ ಮಾಡಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಗೋಲ್‌ಮಾಲ್ ಕುರಿತು ಮಾತನಾಡಿದ ಅವರು, ಮೈಸೂರು ಕ್ಷೇತ್ರದಲ್ಲಿ ನಾವು ಸೋತಿದ್ದರೂ ಇಲ್ಲಿ ಯಾವುದೇ ಗೋಲ್‌ಮಾಲ್ ಆಗಿಲ್ಲ. ಯಾವ ಊರುಗಳಿಂದಲೂ ನಮಗೆ ಆ ರೀತಿಯ ದೂರುಗಳು ಬಂದಿಲ್ಲ. ಆ ರೀತಿಯಾಗಿದ್ದರೆ ಇಷ್ಟು ಹೊತ್ತಿಗೆ ಹೇಳಿ ಬಿಡುತ್ತಿದ್ದರು.
ಕೆಲ ಲೋಕಸಭಾ ಕ್ಷೇತ್ರಗಳಲ್ಲಿ ಇದು ಆಗಿರಬಹುದೇನೋ. ಹೀಗಾಗಿ ಡಿ.ಕೆ.ಶಿವಕುಮಾರ್ ಆ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಸರ್ಕಾರ ತನಿಖಾ ಸಂಸ್ಥೆ ಹಾಗೂ ಆಯೋಗಗಳನ್ನು ದುರುಪಯೋಗಪಡಿಸಿಕೊಳ್ಳುವುದರಲ್ಲಿ ಎತ್ತಿದ ಕೈ. ಹೀಗಾಗಿ ಅನುಮಾನವಿರುವ ಕ್ಷೇತ್ರಗಳ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.