

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರ ವಿಚಾರಣೆಗೆ ಶುಕ್ರವಾರ 2ನೇ ಬಾರಿಗೆ ಜಮೀನು ಮಾಲೀಕ ದೇವರಾಜು ಹಾಜರಾದರು.
ಲೋಕಾಯುಕ್ತ ಎಸ್‌ಪಿ ಟಿ.ಜೆ.ಉದೇಶ್ ತನಿಖಾ ತಂಡದ ಎದುರು ಈ ಹಿಂದೆಯೂ ದೇವರಾಜು ಹಾಜರಾಗಿ ವಿಚಾರಣೆಗೆ ಒಳಗಾಗಿದ್ದರು.
ಇವರೊಂದಿಗೆ ಈ ಪ್ರಕರಣದ ಇತರ ಆರೋಪಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಾರ್ವತಿ, ಸಿಎಂ ಅವರ ಬಾವಮೈದ ಮಲ್ಲಿಕಾರ್ಜುನ ವಿಚಾರಣೆ ಸಹ ಈಗಾಗಲೇ ನಡೆದಿದೆ.
ನಾಲ್ಕು ಆರೋಪಿಗಳ ಹೇಳಿಕೆಗಳು ಪರಸ್ಪರ ತಾಳೆ ಆಗದಿರುವ ಕಾರಣಕ್ಕೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ದೇವರಾಜು ಅವರಿಗೆ ಮತ್ತೊಮ್ಮೆ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಇವರು ವಿಚಾರಣೆ ಎದುರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ವ್ಯಾಪ್ತಿಯ 3.16 ಎಕರೆ ಜಮೀನನ್ನು ದೇವರಾಜು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬಾವಮೈದ ಮಲ್ಲಿಕಾರ್ಜುನ ಅವರಿಗೆ ಮಾರಾಟ ಮಾಡಿದ್ದರು. ಬಳಿಕ ಈ ಜಾಗವನ್ನು ಸಿಎಂ ಪತ್ನಿ ಪಾರ್ವತಿ ಹೆಸರಿಗೆ ಭೂದಾನ ಮಾಡಿದ್ದರು.
ನಾನಲ್ಲ ಮೋಸಗಾರ, ಅವರೇ ಮೋಸಗಾರರು
ನಾನಲ್ಲ ಮೋಸಗಾರ, ಅವರೇ ಮೋಸಗಾರರು ಎಂದು ಮುಡಾ ಹಗರಣದ 4ನೇ ಆರೋಪಿ ದೇವರಾಜು ಹೇಳಿದರು.
ಸುದೀರ್ಘ 8 ತಾಸು ಲೋಕಾಯುಕ್ತ ಪೊಲೀಸರ ವಿಚಾರಣೆಯನ್ನು ಮುಗಿಸಿಕೊಂಡು ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ನೆನ್ನೆಯಷ್ಟೇ ದೇವರಾಜು ವಿರುದ್ಧ ಇವರ ಸಹೋದರ ಮೈಲಾರಯ್ಯನ ಪುತ್ರಿ ಜಮುನಾ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಮೈಲಾರಯ್ಯನ ಮಕ್ಕಳೇ ಮೋಸಗಾರರು ಎಂದು ದೂರಿದ ಅವರು, ಲೋಕಾಯುಕ್ತ ಪೊಲೀಸರು ಕೇಳಿರುವ ದಾಖಲೆ ನೀಡಿದ್ದು, ನಾನು ಮಾಧ್ಯಮಗಳಿಗೆ ಹೇಳಿಕೆ ನೀಡುವುದಿಲ್ಲ. ನಾನು ಏನನ್ನು ಮಾತಾಡಲ್ಲ ಎಂದು ಅಲ್ಲಿಯಿಂದ ನಿರ್ಗಮಿಸಿದರು.