

ಮೈಸೂರು: ಮುಡಾ ದಾಖಲೆಗಳನ್ನು ತೆಗೆದುಕೊಂಡು ಹೋಗಲು ಅದೇನು ಕಡ್ಲೆಪುರಿಯಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್ ಹೇಳಿದರು.
ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಡಾ ದಾಖಲೆಗಳನ್ನು ಎತ್ತಿಕೊಂಡು ಹೋಗುವುದು ಅಷ್ಟೊಂದು ಸುಲಭವೇ? ದಾಖಲೆಗಳು ಕಾಣೆಯಾಗಿವೆ ಎಂದು ಯಾವ ವರದಿಯಲ್ಲಿ ಹೇಳಲಾಗಿದೆ?
ಕ್ಯಾಮರಾ ಸೇರಿ ಎಲ್ಲರ ಮುಂದೆ ಹೇಗೆ ತೆಗೆದುಕೊಂಡು ಹೋಗಲು ಸಾಧ್ಯ? ಅದರಲ್ಲೂ 141 ದಾಖಲೆ ಒಯ್ದಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಅವರಿಗೆ ಆ ನಂಬರ್ ನೀಡಿದವರು ಯಾರು? ಬಹುಶಃ ಈ ಆರೋಪ ಮಾಡಿದವರೇ ತೆಗೆದುಕೊಂಡು ಹೋಗಿರಬೇಕು ಎಂದು ಹರಿಹಾಯ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಕ್ಲೀನ್‌ಚಿಟ್ ನೀಡಿ ಸಲ್ಲಿಸಿರುವ ವರದಿಯನ್ನು ಟೀಕಿಸುತ್ತಿರುವ ಹಾಗೂ ಆಕ್ಷೇಪ ವ್ಯಕ್ತಪಡಿಸುತ್ತಿರುವ ಬಿಜೆಪಿಯವರಿಗೆ ಮಾನ, ಮರ್ಯಾದೆಯೇ ಇಲ್ಲ. ಮಾನ, ಮರ್ಯಾದೆ ಇಲ್ಲದವರು ಮಾತ್ರ ಲೋಕಾಯುಕ್ತ ವರದಿ ಟೀಕಿಸಬೇಕು ಎಂದು ಗುಡುಗಿದರು.
ನಾವು ಯಾವ ತಪ್ಪನ್ನೂ ಮಾಡಿಲ್ಲ. ಚಾಮುಂಡೇಶ್ವರಿ ಬಳಿ ಪ್ರಮಾಣ ಮಾಡೋಣ ಬನ್ನಿ ಎಂದು ಆಹ್ವಾನ ಕೊಟ್ಟಿದ್ದೆ. ಆದರೆ ಯಾರೂ ಆಣೆ, ಪ್ರಮಾಣ ಮಾಡಲು ಬರಲಿಲ್ಲ. ಈಗ ಲೋಕಾಯುಕ್ತ ವರದಿ ಬಂದಿದೆ. ರಾಜ್ಯದ ಜನರಿಗೆ ಈಗ ಸತ್ಯ ಗೊತ್ತಾಗಿದೆ. ಸಿದ್ದರಾಮಯ್ಯ ಯಾವತ್ತೂ ಅಕ್ರಮ ಅಥವಾ ತಪ್ಪು ಮಾಡಿಲ್ಲ. ಬಿಜೆಪಿಯವರು ಸುಳ್ಳು ಹೇಳಿಕೊಂಡು ಮೈಸೂರು ಚಲೋ ಪಾದಯಾತ್ರೆ ಮಾಡಿದರು ಎಂದರು.
ಮುಖ್ಯಮಂತ್ರಿ, ಮಂತ್ರಿಗಳು ತಪ್ಪು ಮಾಡಿದಾಗ ಲೋಕಾಯುಕ್ತದವರು ಜೈಲಿಗೆ ಕಳುಹಿಸಿದ ಉದಾಹರಣೆ ಇದೆ. ಈಗ ಪೂರ್ವಾಗ್ರಹಪೀಡಿತರಾಗಿ ತನಿಖೆ ನಡೆಸಿಲ್ಲ. ವಾಸ್ತವ ಸ್ಥಿತಿಯನ್ನು ತನಿಖೆ ಮಾಡಿ ವರದಿ ನೀಡಿದ್ದಾರೆ ಎಂದರು.
ಮುಡಾದಲ್ಲಿ ಅಕ್ರಮ ಮಾಡಿದ ಒಬ್ಬರನ್ನೂ ಬಿಡುವ ಪ್ರಶ್ನೆಯೇ ಇಲ್ಲ. 50:50 ಅನುಪಾತದಲ್ಲಿ ನಿವೇಶನ ಹಂಚಿಕೆಯಲ್ಲಿ ಆಗಿರುವ ಅಕ್ರಮದ ಬಗ್ಗೆ ಪಿ.ಎನ್. ದೇಸಾಯಿ ಆಯೋಗ ತನಿಖೆ ನಡೆಸುತ್ತಿದೆ. ತನಿಖೆ ಮುಗಿದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
50:50 ಅನುಪಾತದಲ್ಲಿ ಪರಿಹಾರ ನೀಡುವ ನಿಯಮ ಮುಡಾದಲ್ಲಿದೆ. ಅದರ ಅನ್ವಯ ಪರಿಹಾರ ನೀಡಲಾಗಿದೆ. ಆ ನಿಯಮ ಇಲ್ಲದೇ ಪರಿಹಾರವನ್ನು ಹೇಗೆ ಕೊಡುವುದು? ಬಿಜೆಪಿಯವರ ಕಾಲದಲ್ಲೇ ಹೆಚ್ಚು ಪರಿಹಾರವನ್ನು ನೀಡಲಾಗಿದೆ. ಸಿಎಂ ಪತ್ನಿ ಪಾರ್ವತಮ್ಮ ಅವರಿಗೂ ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರೇ ಪರಿಹಾರ ನೀಡಿದ್ದರು ಎಂದರು.