

ಮಳವಳ್ಳಿ: ತಾಲೂಕಿನ ಬಿ.ಜಿ.ಪುರ ಸಮೀಪದ ಮುಟ್ಟನಹಳ್ಳಿ ಗ್ರಾಮದಲ್ಲಿ ಸೋಮವಾರ ಮಂಟೇಸ್ವಾಮಿ ಕೊಂಡೋತ್ಸವ ಜರುಗಿತು.
ಪ್ರತೀತಿಯಂತೆ ಭಾನುವಾರ ಗ್ರಾಮಸ್ಥರು ಜಮೀನುಗಳಿಗೆ ತೆರಳಿ ಹುಣಸೆ ಮತ್ತು ಗೊಬ್ಬಳಿ ಮರಗಳನ್ನು ಕಡಿದು ತುಂಡರಿಸಿ ತಂದು ಮಾರಮ್ಮನ ಗುಡಿ ಆವರಣದಲ್ಲಿ ಜೋಡಿಸಿದರು. ಸಂಜೆ ವೇಳೆಗೆ ಯಜಮಾನರು, ಮುಖಂಡರು ಪೂಜೆ ಸಲ್ಲಿಸಿ ಕೊಂಡೋತ್ಸವಕ್ಕೆ ಸಿದ್ಧಪಡಿಸಿದರು. ಸೋಮವಾರ ಬೆಳಗ್ಗಿನ ಜಾವ ಮಂಟೇಸ್ವಾಮಿ, ಸಿದ್ದಪ್ಪಾಜಿ, ಕುರುಬನಕಟ್ಟೆ ನಿಂಗಯ್ಯ, ಚನ್ನಯ್ಯ ಕಂಡಾಯಗಳನ್ನು ಹೊತ್ತ ಅರ್ಚಕರನ್ನು ಗ್ರಾಮದ ಹೊರ ವಲಯದಲ್ಲಿರುವ ನಿಂಗಯ್ಯನಕಟ್ಟೆ ಬಳಿಗೆ ಕರೆತಂದು ಪೂಜೆ ಸಲ್ಲಿಸಲಾಯಿತು.
ಹೂ ಹೊಂಬಾಳೆ ಮೂಲಕ ತಮಟೆ, ನಗಾರಿ, ಮಂಗಳ ವಾದ್ಯದೊಡನೆ ಮೆರವಣಿಗೆಯಲ್ಲಿ ದೇವಸ್ಥಾನದ ಬಳಿಗೆ ಬರಲಾಯಿತು. ಈ ವೇಳೆ ಪೂಜೆ ಸಲ್ಲಿಸಿ ಕೊಂಡೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಕಂಡಾಯಗಳನ್ನು ಹೊತ್ತ ಅರ್ಚಕರು ಕೊಂಡ ಹಾಯ್ದರು. ನಂತರ ಗ್ರಾಮದ ಬೀದಿಗಳಲ್ಲಿ ಕಂಡಾಯಗಳ ಮೆರವಣಿಗೆ ನಡೆಸಲಾಯಿತು. ಹಬ್ಬದ ಪ್ರಯುಕ್ತ ಮನೆ ಮನೆಗೂ ತಳಿರು ತೋರಣಗಳನ್ನು ಕಟ್ಟಿ ರಸ್ತೆಗಳಲ್ಲಿ ರಂಗೋಲಿ ಬಿಡಿಸಲಾಗಿತ್ತು. ಗ್ರಾಮಸ್ಥರು ಕುಟುಂಬ ಸಮೇತರಾಗಿ ಕಂಡಾಯಗಳಿಗೆ ಪೂಜೆ ಸಲ್ಲಿಸಿದರು. ಕೊಂಡೋತ್ಸವದಲ್ಲಿ ಸುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರು ನೀಲಗಾರರು, ಮಂಟೇಸ್ವಾಮಿ ಮತ್ತು ಸಿದ್ದಪ್ಪಾಜಿ ಭಕ್ತರು ಬೆತ್ತ-ಜೋಳಿಗೆಯೊಂದಿಗೆ ಪಾಲ್ಗೊಂಡಿದ್ದರು. ಮಂಗಳವಾರ ರಾತ್ರಿ ಮಾರಮ್ಮನ ಕೊಂಡೋತ್ಸವ ಸರಳವಾಗಿ ನಡೆಯಿತು.