ಮುಜಾಫರ್ ಅಸ್ಸಾದಿ ನಿಧನಕ್ಕೆ ಸಿಎಂ ಸಂತಾಪ

74e0ab47-ef6f-46e4-856c-fe859641ae3a
Published on

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವರು ಮುಜಾಫರ್ ಅಸ್ಸಾದಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

‘ಮುಜಾಫರ್ ಅಸ್ಸಾದಿ ಅವರು ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ಮಾಡಿ ಸಂತಾಪ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ‘ನಮ್ಮೆಲ್ಲರಿಗೆ ಪ್ರೀತಿಪಾತ್ರರಾಗಿದ್ದ ಹಿರಿಯ ವಿದ್ವಾಂಸ ಮತ್ತು ಸಾಮಾಜಿಕ ಚಿಂತಕ ಪ್ರೊ.ಮುಜಾಫರ್ ಅಸ್ಸಾದಿ ಅವರ ಅನಿರೀಕ್ಷಿತ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಅವರು ಕೇವಲ ಒಬ್ಬ ಪ್ರಾಧ್ಯಾಪಕ ಆಗಿರಲಿಲ್ಲ. ನಾಡಿನ ಜನಪರ ಹೋರಾಟವನ್ನು ವೈಚಾರಿಕ ಚಿಂತನೆಯ ಮಾರ್ಗದರ್ಶನದೊಂದಿಗೆ ಮುನ್ನಡೆಸಿದವರು. ಅವರ ಅಗಲಿಕೆಯಿಂದ ನಾಡು ಬಡವಾಗಿದೆ, ಅವರ ಅಗಲಿಕೆಯಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವುದು ಕಷ್ಟ.

ನಿರಂತರವಾದ ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಕರ್ನಾಟಕದಲ್ಲಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿಯೂ ತಮ್ಮ ವಿದ್ವತ್‌ಪೂರ್ಣ ಬರವಣಿಗೆ ಮತ್ತು ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದ ಪ್ರೊ.ಅಸ್ಸಾದಿ ಅವರು ಕನ್ನಡದ ಹೆಮ್ಮೆಯ ಪುತ್ರ. ವರ್ಷಗಳಿಂದ ನನ್ನ ಹಿತೈಷಿಯಾಗಿ ರಾಜಕೀಯವಾಗಿ ಸದಾ ನನ್ನ ಏಳಿಗೆಯನ್ನು ಹಾರೈಸುತ್ತಿದ್ದ ಪ್ರೊ.ಅಸ್ಸಾದಿ ಅವರ ಸಾವು ವೈಯಕ್ತಿಕವಾಗಿಯೂ ನನ್ನ ಪಾಲಿಗೆ ದೊಡ್ಡ ನಷ್ಟ. ಪ್ರೊ.ಅಸ್ಸಾದಿ ಅವರನ್ನು ಕಳೆದುಕೊಂಡ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ’ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net