

ಬೆಳಗಾವಿ: ಸರ್ಕಾರಗಳೇ ರೈತರ ಮಾರಾಟಕ್ಕೆ ಮುಂದಾಗಿರುವ ದಿನಗಳಲ್ಲಿ ರೈತ ಚಳವಳಿ ಮತ್ತೆ ಶಕ್ತಿ ಪಡೆಯಬೇಕಿದೆ. ಕಲ್ಯಾಣರಾವ ಮುಚಳಂಬಿ ಅವರ ಆದರ್ಶ ಮುಂದಿಟ್ಟುಕೊಂಡು ಹೋರಾಟಗಳು ನಡೆಯಬೇಕಿದೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಆಶಯ ವ್ಯಕ್ತಪಡಿಸಿದರು.
ಇಲ್ಲಿನ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ನಗರದ ಇನ್‌ಸ್ಟಿಟ್ಯೂಟ್ ಆ್ ಇಂಜಿನಿಯರ್ಸ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ರೈತ ಹೋರಾಟಗಾರ, ಪತ್ರಕರ್ತ ಕಲ್ಯಾಣರಾವ ಮುಚಳಂಬಿ ಅವರ ಪ್ರಥಮ ಪುಣ್ಯಸ್ಮರಣೆ, ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ, ಸ್ನೇಹಸೇತು ಕಥಾ ಸಂಕಲನ ಲೋಕಾರ್ಪಣೆ ಹಾಗೂ ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ರೈತ ನಾಯಕ ಕೆ.ಟಿ.ಗಂಗಾಧರ ಮಾತನಾಡಿ, ಪತ್ರಿಕೋದ್ಯಮ ಹಾಗೂ ಚಳವಳಿ ಎರಡೂ ಮಾರ್ಗಗಳಲ್ಲಿ ಕಲ್ಯಾಣರಾವ ಅವರು ಮುಂಚೂಣಿಯಲ್ಲಿ ಇದ್ದವರು. ರೈತ ಹೋರಾಟ ಕೇವಲ ರೈತರಿಗಾಗಿ ಅಲ್ಲ, ಉತ್ಪಾದನೆ, ಉದ್ಯೋಗಿಕ ಹಾಗೂ ಆರ್ಥಿಕ ವಲಯಗಳಿಗೂ ಕೃಷಿಯೇ ಮೂಲ ಎಂಬುದನ್ನು ಬಲವಾಗಿ ವಾದಿಸಿದ್ದರು ಎಂದರು.
ಸ್ನೇಹಸೇತು ಕೃತಿ ಪರಿಚಯ ಮಾಡಿದ ರಾಣಿ ಚನ್ನಮ್ಮ ವಿವಿ ಪ್ರಾಧ್ಯಾಪಕಿ ಮೈತ್ರೇಯಿಣಿ ಗದಿಗೆಪ್ಪಗೌಡರ, ಜಾಗತೀಕರಣದ ಹೊಡೆತಗಳಿಗೆ ನಮ್ಮ ತಾಯ್ತನ, ಹೆಣ್ತನಗಳು ಕೂಡ ಹೇಗೆ ನಲುಗುತ್ತಿವೆ ಎಂಬುದರ ಮೇಲೆ ಕೆಲವರು ಕೃತಿಯಲ್ಲಿ ಬೆಳಕು ಚೆಲ್ಲಿದ್ದಾರೆ. ನಮ್ಮ ನೆಲದ ಹೆಣ್ಣುಮಕ್ಕಳು ಋತುಮತಿಯಾಗುವ ವಯಸ್ಸು ಹಾಗೂ ಲವತ್ತತೆಯ ದರ ಕುಸಿದಿದೆ. ಜಾಗತೀಕರಣಕ್ಕೆ ಸಿಲುಕಿದ ಜೀವನಶೈಲಿಯ ಲಶ್ರುತಿ ಇದು ಎಂದು ಕಳವಳ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಯಾರೊಂದಿಗೂ, ಯಾವುದೇ ವಿಷಯಕ್ಕೂ ರಾಜಿ ಮಾಡಿಕೊಳ್ಳದ ಕಲ್ಯಾಣರಾವ ಜೀವನಪೂರ್ತಿ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಈಜಿದರು ಎಂದರು.
ಗದಗ ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಕಲ್ಯಾಣರಾವ ಅವರದು ಸಾಂಸ್ಕೃತಿಕ ಕಳಕಳಿಯ ವ್ಯಕ್ತಿತ್ವ. ಅವರ ಆದರ್ಶ ಪಾಲಿಸಿಕೊಂಡು ಶಿಷ್ಯಬಳಗ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು. ಮಾಜಿ ಸಚಿವ ಶಶಿಕಾಂತ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಧಾರವಾಡದ ಸಾಹಿತಿ ಲೀಲಾ ಕಲಕೋಟಿ, ಪತ್ರಕರ್ತ ರಾಜೇಂದ್ರ ಪಾಟೀಲ ಮಾತನಾಡಿದರು. ಕಲ್ಯಾಣರಾವ ಅವರ ಪತ್ನಿ ನಿರ್ಮಲಾ, ಪುತ್ರರಾದ ವಿಜಯಕುಮಾರ, ಸಂಪತ್‌ಕುಮಾರ, ಪುತ್ರಿ ವಿಜಯಲಕ್ಷ್ಮೀ ಹಾಗೂ ವೈಶಾಲಿ, ಶಾಂತಾ ಇದ್ದರು. ಪ್ರತಿಷ್ಠಾನದ ಅಧ್ಯಕ್ಷ ಜಲತ್ಕುಮಾರ್ ಪುಣಜಗೌಡ ಸ್ವಾಗತಿಸಿದರು. ಶಿವಾಪುರದ ಕಾಡಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಯಾಣರಾವ್ ಅವರ ಶಿಷ್ಯ ಬಳಗದವರು ನುಡಿ ನಮನ ಸಲ್ಲಿಸಿದರು.
ಪ್ರಶಸ್ತಿ ಪ್ರದಾನ: ಸಾಹಿತಿ ವೀರಣ್ಣ ರಾಜೂರ, ರೈತ ಮುಖಂಡರಾದ ಕೆ.ಟಿ.ಗಂಗಾಧರ, ಅಶೋಕ ತುಬಚಿ, ಪತ್ರಕರ್ತರಾದ ವಿಜಯಕುಮಾರ ಪಾಟೀಲ, ಮಹಾವೀರ ಮೆಕ್ಕಳಕಿ ಅವರಿಗೆ ಕಲ್ಯಾಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಥಾ ಸ್ಪರ್ಧೆಯ ವಿಜೇತರಾದ ಯಶಸ್ವಿನಿ ಶ್ರೀಧರಮೂರ್ತಿ (ಪ್ರಥಮ), ಸುನಂದಾ ಹಾಲಬಾವಿ (ದ್ವಿತೀಯ), ಪ್ರಕಾಶ ಖಾಡೆ (ತೃತೀಯ) ಹಾಗೂ ಹಲವರಿಗೆ ಬಹುಮಾನ ವಿತರಿಸಲಾಯಿತು.