

ಸಂತೋಷಕುಮಾರ ಕಾಮತ ಮಾಂಜರಿ
ಏಳು ವರ್ಷಗಳ ಹಿಂದೆ ಆರಂಭಗೊಂಡ ಇಂಗಳಿ-ಹಳೆದಿಗ್ಗೇವಾಡಿ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿ ಅನುದಾನ ಕೊರತೆಯಿಂದ ಇನ್ನೂವರೆಗೂ ಮುಗಿದಿಲ್ಲ. ಇದರಿಂದ ನೂರಾರು ಎಕರೆ ಕೃಷಿ ಭೂಮಿ ಹಾಗೂ ಹಲವು ಗ್ರಾಮಗಳು ಸಮರ್ಪಕ ನೀರಿನ ವ್ಯವಸ್ಥೆಯಿಂದ ವಂಚಿತಗೊಂಡಿವೆ.
ಕಾಮಗಾರಿಗೆ ಮೊದಲ ಹಂತದಲ್ಲಿ ಸರ್ಕಾರ 32 ಕೋಟಿ ರೂ.ಅನುದಾನ ಮಂಜೂರು ಮಾಡಿತ್ತು. ಅಂದಿನ ನೀರಾವರಿ ಸಚಿವ ರಮೇಶ ಜಾರಕಿಹೊಳಿ 2017-18ರಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ಸದ್ಯ ಅರ್ಧ ಕಾಮಗಾರಿಯಾಗಿದ್ದು, ರಾಜ್ಯ ಸರ್ಕಾರ ಬಾಕಿ ಉಳಿದ 38 ಕೋಟಿ ರೂ.ಅನುದಾನ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ, ಕಾಮಗಾರಿ ಅಪೂರ್ಣವಾಗಿದೆ.
ಚಿಕ್ಕೋಡಿ ತಾಲೂಕಿನ ಇಂಗಳಿ ಮತ್ತು ರಾಯಬಾಗ ತಾಲೂಕಿನ ಹಳೆದಿಗ್ಗೇವಾಡಿ ಬಳಿ ಕೃಷ್ಣಾ ನದಿಗೆ ಅಂದಾಜು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಬ್ರಿಡ್ಜ್ ಕಂ ಬಾಂದಾರದಿಂದ ರಾಯಬಾಗ ತಾಲೂಕಿನ ಜಲಾಲಪುರ, ದಿಗ್ಗೇವಾಡಿ, ನಸಲಾಪುರ, ಬಾವನ ಸೌಂದತ್ತಿ ಮತ್ತು ಚಿಕ್ಕೋಡಿ ತಾಲೂಕಿನ ಇಂಗಳಿ, ಮಾಂಜರಿ, ಅಂಕಲಿ, ಯಡೂರ ಸೇರಿ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು, ಕೃಷಿ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ, ಬ್ರಿಡ್ಜ್ ನಿರ್ಮಾಣವಾದರೆ ಕಬ್ಬು ಸಾಗಿಸಲು ಸುತ್ತುವರಿದು ಹೋಗುವ ರೈತರಿಗೂ ಪ್ರಯಾಸವೂ ತಪ್ಪಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಸಂಪರ್ಕ ಸುಲಭವಾಗಲಿದೆ. ಜತೆಗೆ ರಾಯಬಾಗ ಮತ್ತು ಕಾಗವಾಡ ತಾಲೂಕಿನ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಏತ ನೀರಾವರಿ ಯೋಜನೆಗಳಿಗೂ ಸಹಕಾರಿಯಾಗಲಿದೆ.
ಡಾ.ಕೋರೆ, ಕವಟಗಿಮಠ ಮುತುವರ್ಜಿ: ರಾಜ್ಯಸಭೆ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಅವರು ಮುತುವರ್ಜಿ ವಹಿಸಿ ಕೃಷ್ಣಾ ನದಿಗೆ ದಿಗ್ಗೇವಾಡಿ-ಇಂಗಳ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ ಯೋಜನೆ ರೂಪಿಸಿದ್ದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಯೋಜನೆ ಜಾರಿಗಾಗಿ ಹೋರಾಟ ಮಾಡಿ ಕಾಮಗಾರಿಗೆ ಪ್ರಸ್ತಾವನೆೆ ಸಲ್ಲಿಸಿದ್ದರು. ಆದರೆ, ಯೋಜನೆಗೆ ನಿಗದಿಪಡಿಸಿದ ಸ್ಥಳ ಹಿಪ್ಪರಗಿ ಡ್ಯಾಂ ಹಿನ್ನೀರಿನಲ್ಲಿ ಮುಳುಗಡೆಯಾಗುತ್ತದೆಂಬ ಕಾರಣ ನೀಡಿದ್ದ ಆರ್ಥಿಕ ಇಲಾಖೆ ಪ್ರಸ್ತಾವನೆಗೆ ಅನುಮೋದನೆ ನೀಡಿರಲಿಲ್ಲ.
ಬೇಸಿಗೆಯಲ್ಲಿ ಹಿಪ್ಪರಗಿ ಡ್ಯಾಂ ನೀರು ಕಡಿಮೆಯಾಗುತ್ತದೆ. ಐದಾರು ತಿಂಗಳಾದರೂ ಬ್ಯಾರೇಜ್‌ನಿಂದ ಕಾಗವಾಡ, ರಾಯಬಾಗ ಮತ್ತು ಚಿಕ್ಕೋಡಿ ತಾಲೂಕಿಗೆ ನೀರಾವರಿ ಅನುಕೂಲವಾಗುತ್ತದೆ ಎಂದು ಮಹಾಂತೇಶ ಕವಟಗಿಮಠ ಸರ್ಕಾರಕ್ಕೆ ಮನವರಿಕೆ ಮಾಡಿದ ಬಳಿಕ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು. ಇನ್ನಾದರೂ ಅನುದಾನ ಬಿಡುಡೆಗೊಂಡು ಕಾಮಗಾರಿ ಪೂರ್ಣಗೊಳ್ಳವುದೇ ಎಂಬುವುದನ್ನು ಕಾಯ್ದುನೋಡಬೇಕು.
ಅಪೂರ್ಣಗೊಂಡ ವಿವಿಧ ಬಾಂದಾರಗಳು: ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಚೆಂದೂರಟೇಕ್-ಸೈನಿಕ ಟಾಕಳಿ ಸೇರಿ ಆರಕ್ಕೂ ಹೆಚ್ಚು ಬ್ರಿಜ್ ಕಂ ಬಾಂದಾರ ಕಾಮಗಾರಿಗಳು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿವೆ. ಐದಾರು ವಷರ್ಗಳ ಹಿಂದೆಯೇ ಆರಂಭಿಸಿದ ಕಾಮಗಾರಿಗಳನ್ನು ಮುಗಿಸಲು ಇನ್ನೆಷ್ಟ್ಟು ದಿನ ಕಾಯಬೇಕು? ಎಂಬುದು ಸಾರ್ವಜನಿಕರ ಪ್ರಶ್ನೆ.
ಬೆಳಗಾವಿ ಜಿಲ್ಲೆಯ ಹಲವಾರು ನೀರಾವರಿ ಯೋಜನೆಗಳು ಅನುದಾನವಿಲ್ಲದೆ ಸ್ಥಗಿತಗೊಂಡಿವೆ. ಜನರ ಹಿತದೃಷ್ಟಿಯಿಂದ ಶೀಘ್ರವೇ ರಾಜ್ಯ ಸರ್ಕಾರ ಎಲ್ಲ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು. | ಡಾ.ಪ್ರಭಾಕರ ಕೋರೆ, ರಾಜ್ಯಸಭೆ ಮಾಜಿ ಸದಸ್ಯ ಇಂಗಳಿ-ದಿಗ್ಗೇವಾಡಿ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬಾಕಿ ಉಳಿದ 38 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇನೆ. | ಡಿ.ಎಂ.ಐಹೊಳೆ ಶಾಸಕ