ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಗೆ ಒತ್ತಾಯ

Primary HM Sangh Memorandum Photo
Published on

ಬೀದರ್: ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಅವರ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿ, ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.
ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ ಪ್ರೌಢಶಾಲೆ ಸಹ ಶಿಕ್ಷಕರ ವೇತನ ಶ್ರೇಣಿ ಹಾಗೂ ಎರಡನೇ ಬಡ್ತಿಗೆ ಹಿರಿಯ ಮುಖ್ಯಶಿಕ್ಷಕರಿಗೆ ಪ್ರೌಢಶಾಲಾ ಮುಖ್ಯಶಿಕ್ಷಕರ ವೇತನ ಶ್ರೇಣಿ ಕೊಡಬೇಕು. ಸೇವಾ ಹಿರಿತನ ಪರಿಗಣಿಸಿ ಶಿಕ್ಷಣ ಸಂಯೋಜಕರ ಹುದ್ದೆಗೆ ನೇಮಕ ಮಾಡಬೇಕು. ಪ್ರೌಢಶಾಲಾ ಮುಖ್ಯಶಿಕ್ಷಕರ ಮಾದರಿಯಲ್ಲಿ ವರ್ಷಕ್ಕೆ 30 ಗಳಿಕೆ ರಜೆ ನೀಡಬೇಕು. ಪ್ರಾಥಮಿಕ ಶಾಲೆಗಳಿಗೆ ಗ್ರುಪ್ ಡಿ ನೌಕರರನ್ನು ನೇಮಕ ಮಾಡಬೇಕು. ನಿರ್ವಹಣೆಗಾಗಿ ಕಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ ರೂ. 50 ಸಾವಿರ, ಹಿರಿಯ ಪ್ರಾಥಮಿಕ ಶಾಲೆಗೆ ರೂ. 1 ಲಕ್ಷ ಹಾಗೂ ಮಾದರಿ ಪ್ರಾಥಮಿಕ ಶಾಲೆಗೆ ರೂ. 1.5 ಲಕ್ಷ ಅನುದಾನ ಕಲ್ಪಿಸಬೇಕು. ಬಿಸಿಯೂಟ ನಿರ್ವಹಣೆಗೆ ಪ್ರತಿ ತಿಂಗಳ 1ನೇ ದಿನಾಂಕದಂದೇ ಮುಖ್ಯಶಿಕ್ಷಕರ ಖಾತೆಗೆ ಅನುದಾನ ಜಮೆ ಮಾಡಬೇಕು. ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು. ಏಳನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿ, ಜುಲೈನಿಂದ ಪೂರ್ವಾನ್ವಯ ಆಗುವಂತೆ ಕೇಂದ್ರ ಮಾದರಿ ವೇತನ ಕೊಡಬೇಕು. ಪಾಥಮಿಕ ಶಾಲಾ ಮುಖ್ಯಕ್ಷಕರ ವರ್ಗಾವಣೆಯ ಕನಿಷ್ಠ 3 ವರ್ಷಗಳ ಸೇವಾ ಅವಧಿ ನಿಯಮ ರದ್ದುಪಡಿಸಬೇಕು. ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆಯನ್ನು ಬಡ್ತಿ ನಂತರ ನಡೆಸಬೇಕು ಎನ್ನುವ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ರಾಜಕುಮಾರ ಹೊಸದೊಡ್ಡೆ, ಬಸವರಾಜ ಜಕ್ಕಾ, ರಾಜಶೇಖರ ಮಂಗಲಗಿ, ಮಕ್ಸೂದ್ ಅಲಿ, ಸೈಯದ್ ಅಸ್ಲಂ, ಶೇಕ್ ಅಹಮ್ಮದ್, ಪಾಂಡುರಂಗ ಬೆಲ್ದಾರ್, ಸುರೇಶ ಟಾಳೆ, ಪ್ರಕಾಶ ರೆಡ್ಡಿ, ಶರಣಪ್ಪ ಕಣಜಿ, ಸರಸ್ವತಿ ಕಾಡವಾದ, ಸಂಧ್ಯಾರಾಣಿ, ಅನಿಲಕುಮಾರ ಖಾನಾಪುರೆ, ಶ್ರೀನಿವಾಸ ರೆಡ್ಡಿ, ಸಂಜುಕುಮಾರ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net