ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿಗೆ ಮನವಿ

Request for separate pay scale for head teachers
ನಿಡಗುಂದಿ ವಲಯದ ಮುಖ್ಯಶಿಕ್ಷಕರ ಸಭೆಯಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮಾತನಾಡಿದರು.
Published on

ನಿಡಗುಂದಿ: ಪ್ರಾಥಮಿಕ ಹಂತದಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಹಾಗೂ ಮುಖ್ಯಶಿಕ್ಷಕರಿಗೆ ದಿನನಿತ್ಯ ಹಲವು ಸವಾಲುಗಳಿದ್ದರೂ, ಮಕ್ಕಳ ಹಿತದೃಷ್ಟಿಯಿಂದ ಸಮರ್ಪಣಾ ಮನೋಭಾವ, ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದರು.

ಪಟ್ಟಣದ ಎಂಪಿಎಸ್ ಶಾಲೆಯಲ್ಲಿ ಮಂಗಳವಾರ ಜರುಗಿದ ನಿಡಗುಂದಿ ವಲಯದ ಮುಖ್ಯಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕೇತ್ರದ ಅಭಿವೃದ್ಧಿಗೆ ನಾವೆಲ್ಲ ಕೊರತೆಗಳ ನೆಪ ಹೇಳದೇ ಹೆಗಲು ಕೊಟ್ಟು ದುಡಿಯೋಣ ಎಂದರು.

ನಮ್ಮ ರಾಜ್ಯದಲ್ಲಿ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿಯಿಲ್ಲ. ತಮಗಿಂತ ಕಿರಿಯ ಶಿಕ್ಷಕರುಗಳಿಗೆ ಸಿಗುವ ವಾರ್ಷಿಕ ಹಲವು ವರ್ಷಗಳ ವೇತನ ಬಡ್ತಿ ಇಲ್ಲದ್ದಕ್ಕಾಗಿ ಅವರು ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹುದ್ದೆಯಿದ್ದರೂ ಪ್ರತ್ಯೇಕ ವೇತನ ಶ್ರೇಣಿ ಇಲ್ಲದ ಒಂದೇ ಹುದ್ದೆ ಮುಖ್ಯಶಿಕ್ಷಕರ ಹುದ್ದೆಯಾಗಿದೆ. ಕೇರಳದಲ್ಲಿ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿಯಿದೆ. ಸಾಕಷ್ಟು ಕೆಲಸದ ಒತ್ತಡವಿರುವ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡುವಂತೆ 7ನೇ ವೇತನ ಆಯೋಗಕ್ಕೆ ಅಂಕಿ ಅಂಶಗಳ ಸಹಿತ ಸಂಘ ಈಗಾಗಲೇ ಮನವಿ ಸಲ್ಲಿಸಿದೆ. ವೇತನ ಆಯೋಗದಿಂದ ಸಭೆ ನಿಗಧಿಯಾಗಿದೆ. ಬಳಿಕ ಮುಖ್ಯಶಿಕ್ಷಕರ ವೇತನ ವ್ಯತ್ಯಾಸದ ಬಗ್ಗೆ ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಬಿಸಿಯೂಟದ ಆರ್ಥಿಕ ವ್ಯವಹಾರ ಎಸ್‌ಡಿಎಂಸಿ, ಮುಖ್ಯಶಿಕ್ಷಕರ ಜಂಟಿ ಖಾತೆಗೆ ವರ್ಗಾಯಿಸಿದ್ದು, ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಗೊಂದಲವನ್ನು ನಿವಾರಿಸಲಾಗುವುದು. ಪದವೀಧರ ಶಿಕ್ಷಕರನ್ನು 6ರಿಂದ 8ನೇ ವರ್ಗಕ್ಕೆ ಹಾಗೂ ಪೌಢಶಾಲೆಗೆ ಬಡ್ತಿ ಕೊಡಿಸುವ ವಿಷಯದಲ್ಲಿ ಸಂಘ ಬದ್ಧತೆಯಿಂದ ಕೈಗೊಂಡ ಕ್ರಮಗಳನ್ನು ಅವರು ವಿವರಿಸಿದರು.

ಶಿಕ್ಷಕರ ವರ್ಗಾವಣೆ ಆರಂಭಗೊಂಡಿದ್ದು, ಇಲ್ಲಿಯವರೆಗೆ ರಾಜ್ಯದ 19 ಸಾವಿರಕ್ಕೂ ಅಧಿಕ ಪ್ರಾಥಮಿಕ ಶಾಲಾ ಶಿಕ್ಷಕರು ವರ್ಗಾವಣೆ ಪಡೆದಿದ್ದಾರೆ. ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಎಚ್‌ಪಿಎಸ್ ಶಾಲೆಯ ಮುಖ್ಯ ಶಿಕ್ಷಕರು, ಎಂಪಿಎಸ್ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಪದೋನ್ನತಿ ಪ್ರಕ್ರಿಯೆಗೆ ಇಲಾಖೆಗೆ ಮನವಿ ಮಾಡಲಾಗುವುದು ಎಂದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ, ಶಿಕ್ಷಣ ಸಂಯೋಜಕ ಉದಯಕುಮಾರ ಬಶೆಟ್ಟಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎಸ್. ಅವಟಿ, ಸಿಆರ್‌ಪಿಗಳಾದ ಭಾಷೇಸಾಬ ಮನಗೂಳಿ, ಸುರೇಶ ಹುರಕಡ್ಲಿ, ಐ.ಎಂ. ಕಾರಕೂನ ಹಾಗೂ ವಲಯದ ಮುಖ್ಯ ಶಿಕ್ಷಕರು, ಶಿಕ್ಷಕರ ಸಂಘದ ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net