

ಬೀದರ್: ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ ನಿಗದಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ನಗರದಲ್ಲಿ ಸಂಘದ ಪದಾಧಿಕಾರಿಗಳು ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ನೇತೃತ್ವದಲ್ಲಿ ನಿಯೋಗದಲ್ಲಿ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂಖಾನ್ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರಿಗೆ ಪ್ರೌಢಶಾಲೆ ಸಹ ಶಿಕ್ಷಕರ ಹಾಗೂ ಎರಡನೇ ಬಡ್ತಿಗೆ ಪ್ರೌಢಶಾಲೆ ಮುಖ್ಯಶಿಕ್ಷಕರ ವೇತನ ಶ್ರೇಣಿ ನಿಗದಿಪಡಿಸಬೇಕು. ಪ್ರೌಢಶಾಲಾ ಮುಖ್ಯಶಿಕ್ಷಕರ ಮಾದರಿಯಲ್ಲಿ ವರ್ಷಕ್ಕೆ 30 ಗಳಿಕೆ ರಜೆ ಕೊಡಬೇಕು. ಸೇವಾ ಹಿರಿತನ ಆಧಾರದಲ್ಲಿ ಶಿಕ್ಷಣ ಸಂಯೋಜಕ ಹುದ್ದೆಗೆ ನೇಮಕ ಮಾಡಬೇಕು ಎಂದು ಬೇಡಿಕೆ ಮಂಡಿಸಿದರು.
ವರ್ಗಾವಣೆಗೆ ಕನಿಷ್ಠ 3 ವರ್ಷ ಪೂರೈಸಿರಬೇಕು ಎನ್ನುವ ನಿಯಮ ರದ್ದುಪಡಿಸಬೇಕು. ಹೊಸ ಪಿಂಚಣಿ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು. ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ್ ವಿದ್ಯುತ್ ಪೂರೈಸಬೇಕು. ಶಾಲೆಗಳಿಗೆ ಗ್ರೂಪ್ ಡಿ ನೌಕರರನ್ನು ನೇಮಿಸಬೇಕು. ಕಾಲ ಮಿತಿ ಬಡ್ತಿ ನೀಡಬೇಕು. ಶಾಲೆ ನಿರ್ವಹಣೆಗೆ ಕಿರಿಯ ಪ್ರಾಥಮಿಕ ಶಾಲೆಗೆ ವಾರ್ಷಿಕ ರೂ. 50 ಸಾವಿರ, ಹಿರಿಯ ಪ್ರಾಥಮಿಕ ಶಾಲೆಗೆ ರೂ. 1 ಲಕ್ಷ ಹಾಗೂ ಮಾದರಿ ಪ್ರಾಥಮಿಕ ಶಾಲೆಗೆ ರೂ. 2 ಲಕ್ಷ ಅನುದಾನ ಕಲ್ಪಿಸಬೇಕು. ಮುಖ್ಯಶಿಕ್ಷಕ ಹಾಗೂ ಮುಖ್ಯ ಅಡುಗೆಯವರ ಹೆಸರಲ್ಲಿ ಹಿಂದಿನಂತೆ ಬಿಸಿಯೂಟ ನಿರ್ವಹಣೆ ಜಂಟಿ ಖಾತೆ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಸಂಘದ ಮಹಮ್ಮದ್ ನಜಿಬೊದ್ದಿನ್, ನಸರಪ್ಪ ಕೀರ್ತಿ, ಎಂ.ಡಿ. ಮಕ್ಸೂದ್ ಅಲಿ, ಫಕ್ರೊದ್ದಿನ್, ಶೇಕ್ ಅಹಮ್ಮದ್, ಪ್ರೌಢಶಾಲಾ ಶಿಕ್ಷಕರ ಸಂಘದ ಪಾಂಡುರಂಗ ಬೆಲ್ದಾರ್, ಶ್ರೀಮಂತ ಧಬಾಲೆ, ಸುರೇಶ ಟಾಳೆ, ಪ್ರಕಾಶ ರೆಡ್ಡಿ, ಈಶ್ವರ ಎಂ,. ಗೋವಿಂದ ಪೂಜಾರಿ, ಯಾಸೀರ್, ಅರಹಂತ, ಅನಿಲಕುಮಾರ ಖಾನಾಪುರೆ ಇದ್ದರು.