

ಆನೇಕಲ್: ರಾಜ್ಯದ ಪ್ರತಿಷ್ಠಿತ ಎಪಿಎಂಸಿ ಹಣ್ಣಿನ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ಸಿಂಗೇನ ಅಗ್ರಹಾರ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಾರಿಗೊಂದು ಗುಂಡಿಗಳು ಬಿದ್ದಿದ್ದು, ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ.
ಹುಸ್ಕೂರಿನಿಂದ ಅಗ್ರಹಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಡಾಂಬರು ಕಂಡಿಲ್ಲ. ಸಮರ್ಪಕ ನಿರ್ವಹಣೆಯೂ ಇಲ್ಲದಾಗಿದ್ದು, ಅಡಿಗಡಿಗೂ ಉಂಟಾಗಿರುವ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಹಣ್ಣಿನ ಮಾರುಕಟ್ಟೆಗೆ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ರೈತರು ಹಣ್ಣು, ತರಕಾರಿಗಳನ್ನು ತರುತ್ತಾರೆ. ಭಾರಿ ವಾಹನಗಳಲ್ಲಿ ಸರಕು ಸಾಗಿಸಲಾಗುತ್ತದೆ. ಆದರೆ ಗುಂಡಿಗಳಿಂದಾಗಿ, ವಾಹನಗಳ ಸರಾಗ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗುತ್ತಿದೆ.
ವಾರದಲ್ಲಿ ನಾಲ್ಕೈದು ಸಾವು: ಈ ರಸ್ತೆಯಲ್ಲಿ ಬಿಎಂಟಿಸಿ ಬಸ್ ಡಿಪೋ, ಪ್ರಾದೇಶಿಕ ಸಾರಿಗೆ ಕಚೇರಿ ತರಬೇತಿ ಕೇಂದ್ರ ಹಾಗೂ ಹಲವು ಶಾಲೆಗಳಿವೆ. ಶಾಲೆಯ ವಾಹನಗಳು ಅಲ್ಲದೆ, ಶಾಲೆಗಳಿಗೆ ಮಕ್ಕಳನ್ನು ಬಿಡಲು ಪಾಲಕರು ದ್ವಿಚಕ್ರ ವಾಹನಗಳಲ್ಲಿ ಬರುತ್ತಾರೆ. ಆ ವಾಹನಗಳನ್ನು ಚಲಾಯಿಸಲು ಚಾಲಕರು ಸಾಕಷ್ಟು ಸರ್ಕಸ್ ಮಾಡುವುದು ಅನಿವಾರ್ಯವಾಗಿದೆ. ವಾರದಲ್ಲಿ ನಾಲ್ಕೈದು ಅಪಘಾತಗಳು ಸಂಭವಿಸುತ್ತಿದ್ದು, ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ರಸ್ತೆಯನ್ನು ದುರಸ್ತಿಗೊಳಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವುದು ವಿಪರ್ಯಾಸವೇ ಸರಿ.
ನಾನಾ ಕಾಯಿಲೆಗಳಿಗೆ ಆಹ್ವಾನ: ರಸ್ತೆಯು ಡಾಂಬರು ಕಾಣದಿರುವ ಕಾರಣ ಯಾವುದಾದರೂ ಒಂದು ವಾಹನ ಓಡಾಡಿದರೂ ಧೂಳು ಏಳುತ್ತದೆ. ಇದರಿಂದಾಗಿ ರಸ್ತೆಯ ಸುತ್ತಮುತ್ತಲ ನಿವಾಸಿಗಳು ಹಾಗೂ ವರ್ತಕರು ಆಸ್ತಮಾ ಸೇರಿ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ರಸ್ತೆ ದುರಸ್ತಿಗೊಳಿಸಿ, ಸಹಕರಿಸುವಂತೆ ಅಧಿಕಾರಿಗಳಿಗೆ ಜನರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ರಸ್ತೆ ಬೆಂಗಳೂರು ನಗರ ಜಿಪಂ ವ್ಯಾಪ್ತಿಗೆ ಒಳಪಡುತ್ತದೆ. ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದಾಗಿ ಮನುಷ್ಯ ಮಾತ್ರದವರಿಗೆ ಓಡಾಡಲು ಸಾಧ್ಯವಿಲ್ಲ. ಪ್ರತಿನಿತ್ಯ ಒಂದಿಲ್ಲೊಂಡು ಅಪಘಾತವಾಗಿ ಒಬ್ಬರಿಲ್ಲೊಬ್ಬರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೂ ಅಧಿಕಾರಿಗಳು ರಸ್ತೆ ದುರಸ್ತಿಗೊಳಿಸಲು ಮನಸ್ಸು ಮಾಡುತ್ತಿಲ್ಲ. ನಾಯಕ್, ವಾಹನ ಸವಾರ ಹುಸ್ಕೂರು ಮಾರುಕಟ್ಟೆಯ ರಸ್ತೆ ಅಭಿವೃದ್ಧಿಪಡಿಸಿ ಗುಂಡಿಮುಕ್ತಗೊಳಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ. ಬಿ.ಶಿವಣ್ಣ, ಶಾಸಕ