

ಹುಬ್ಬಳ್ಳಿ : ಕಠಿಣ ಲಾಕ್ಡೌನ್ ಮುಂದುವರಿದ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಭಾನುವಾರ ಸ್ತಬ್ಧವಾಗಿತ್ತು. ಪ್ರಮುಖ ರಸ್ತೆಗಳಲ್ಲಿ ವಾಹನ, ಜನಸಂಚಾರ ಬಹಳ ವಿರಳವಾಗಿತ್ತು. ಆದರೆ, ಕೆಲ ಒಳ ರಸ್ತೆಗಳು ಜನರಿಂದ ಗಿಜುಗುಡುತ್ತಿದ್ದವು.
ದಿನಸಿ ಸಾಮಗ್ರಿ ಖರೀದಿಗೆ ಗುರುವಾರ, ಶುಕ್ರವಾರ ಹಾಗೂ ಶನಿವಾರದಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಹಾಗಾಗಿ, ಜನ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಭಾನುವಾರದಿಂದ (ಮೇ 30ರಿಂದ) ಜೂನ್ 7ರವರೆಗೆ ಮತ್ತೆ ಕಠಿಣ ಲಾಕ್ಡೌನ್ ಶುರುವಾಗಿದೆ. ಬೆಳಗ್ಗೆ 6ರಿಂದ 8ರವರೆಗೆ ಮಾತ್ರ ಹಾಲು, ತರಕಾರಿ ಖರೀದಿಗೆ ಅವಕಾಶ ನೀಡಲಾಗಿದೆ.
ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಹೊಸೂರು, ಸ್ಟೇಶನ್ ರಸ್ತೆ, ಹಳೇ ಹುಬ್ಬಳ್ಳಿ ಇಂಡಿ ಪಂಪ್ ವೃತ್ತ, ದುರ್ಗದ ಬೈಲ್ ವೃತ್ತ, ಕೇಶ್ವಾಪುರ ಸವೋದಯ ವೃತ್ತ ಸೇರಿ ಹಲವು ಪ್ರಮುಖ ಪ್ರದೇಶದಲ್ಲಿ ಪೊಲೀಸರು ಚೆಕ್ ಪೋಸ್ಟ್ ನಿರ್ವಿುಸಿದ್ದಾರೆ. ಇಲ್ಲಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ಮಾಡಲಾಗುತ್ತದೆ. ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ. ಆದರೆ, ಬಹುತೇಕ ಒಳ ರಸ್ತೆಗಳಲ್ಲಿ ಪೊಲೀಸರ ಸುಳಿವಿಲ್ಲ. ಹಾಗಾಗಿ, ಜನ ತಮಗಿಷ್ಟ ಬಂದಂತೆ ಓಡಾಡುತ್ತಿದ್ದಾರೆ. ಗುಂಪು ಸೇರುತ್ತಿದ್ದಾರೆ.
ಹಳೇ ಹುಬ್ಬಳ್ಳಿ, ಕಸಬಾಪೇಟೆ, ಉಣಕಲ್ನ ಕೆಲ ಭಾಗದಲ್ಲಿ ಲಾಕ್ಡೌನ್ ಸಂಬಂಧವೇ ಇಲ್ಲದಂಥ ವಾತಾವರಣವಿತ್ತು. ಬೆಳಗ್ಗೆ 9 ಗಂಟೆ ನಂತರವೂ ಹಣ್ಣು, ತರಕಾರಿ ವ್ಯಾಪಾರ ಎಗ್ಗಿಲ್ಲದೆ ನಡೆದಿತ್ತು. ಹಳೇಹುಬ್ಬಳ್ಳಿ, ಉಣಕಲ್ನಲ್ಲಿ ಮಾಂಸದ ವ್ಯಾಪಾರ ಕದ್ದು ಮುಚ್ಚಿ ನಡೆದಿತ್ತು. ಕೆಲವು ದಿನಸಿ ಅಂಗಡಿಗಳು ಅರ್ಧ ತೆರೆದಿದ್ದವು. ಯುವಕರು, ಮಕ್ಕಳು ಸ್ವಚ್ಛಂದವಾಗಿ, ನಿರ್ಭಯವಾಗಿ ಓಡಾಡಿಕೊಂಡಿದ್ದು ಕಂಡು ಬಂತು.
525 ಕೋವಿಡ್ ಪ್ರಕರಣ ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಶನಿವಾರ 525 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 19 ಜನ ಮೃತಪಟ್ಟಿದ್ದಾರೆ. 1010 ಜನರು ಬಿಡುಗಡೆಯಾಗಿದ್ದು, 6269 ಸಕ್ರಿಯ ಪ್ರಕರಣಗಳಿವೆ. ಕೋವಿಡ್ನಿಂದ ಇದುವರೆಗೆ 959 ಜನರು ಮೃತಪಟ್ಟಿದ್ದಾರೆ.
ಆಕ್ಸಿಜನ್ ಕಾನ್ಸನ್ಟ್ರೇಟರ್ ದೇಣಿಗೆ
ಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವ್ಯಾಪ್ತಿಗೆ 50 ಆಕ್ಸಿಜನ್ ಕಾನ್ಸನ್ಟ್ರೇಟರ್, 7 ವೆಂಟಿಲೇಟರ್, 8 ಹೈ ಪ್ಲೋ ಆಕ್ಸಿಜನ್ ಉಪಕರಣಗಳನ್ನು ದೇಣಿಗೆ ನೀಡಲಾಗಿದೆ.
ಇದರಲ್ಲಿ 10 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಹುಬ್ಬಳ್ಳಿಯ ಕಿಮ್ಸ್ಗೆ ಮತ್ತು ಧಾರವಾಡದ ಜಿಲ್ಲಾ ಆಸ್ಪತ್ರೆಗೆ ದೇಣಿಗೆ ನೀಡಲಾಯಿತು. ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎಲ್.ಎಚ್. ಮಂಜುನಾಥ, ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡರ, ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ, ಬಿಜೆಪಿಯ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಎಸ್.ಎಸ್. ಶೆಟ್ಟರ್ ಫೌಂಡೇಷನ್ನ ಸಂಕಲ್ಪ ಶೆಟ್ಟರ್, ಸಂತೋಷ ಶೆಟ್ಟಿ ಹಾಗೂ ಇತರರಿದ್ದರು.