

ಹುಬ್ಬಳ್ಳಿ: ಸಮಸ್ಯೆಗಳು ರೈತರನ್ನು ಬೆಂಬಿಡದೇ ಕಾಡುತ್ತಿದ್ದು, ಅವರು ಸುಧಾರಣೆಯಾಗಲು ಬಹಳಷ್ಟು ಅಡೆತಡೆಗಳಿವೆ. ಈ ದಿಸೆಯಲ್ಲಿ ರಾಜ್ಯದ ಕೃಷಿಕರ ಸಂಕಷ್ಟಗಳನ್ನು ಆಲಿಸಲು ಅವರ ಬಳಿ ಹೋಗುತ್ತಿದ್ದೇನೆ. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುತ್ತೇನೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ ನೀಡಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಭಾನುವಾರ ರೈತರೊಂದಿಗೆ ಸಂವಾದ ನಡೆಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೈತರು ಸಾವಯವ ಕೃಷಿಗೆ ಒತ್ತು ನೀಡುವಂತೆ ಹೇಳಿದ್ದಾರೆ. ಸದ್ಯ ರಾಜ್ಯದ 1.10 ಲಕ್ಷ ಹೆಕ್ಟೇರ್ನಲ್ಲಿ ನಡೆಯುತ್ತಿರುವ ಸಾವಯವ ಕೃಷಿಯನ್ನು 1.55 ಲಕ್ಷ ಹೆಕ್ಟೇರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ವಿದ್ಯುತ್ಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಪೂರೈಕೆಗೆ ಗಂಭೀರ ಚಿಂತನೆ ಮಾಡಲಾಗುವುದು. ಕೃಷಿ ಇಲಾಖೆ ಹಾಗೂ ಅಧಿಕಾರಿಗಳು ಸಾಕಷ್ಟು ಮುಂದೆ ಹೋಗಿದ್ದಾರೆ. ಆದರೆ, ಅದೇ ಮಟ್ಟದಲ್ಲಿ ಕೃಷಿಕರನ್ನು ಮುಂದೆ ಕರೆದುಕೊಂಡು ಹೋಗಿಲ್ಲ ಎಂದು ಸೂಚ್ಯವಾಗಿ ಹೇಳಿದರು.
ಹುದ್ದೆ ಭರ್ತಿ: ಕೃಷಿ ಇಲಾಖೆಯಲ್ಲಿ ಶೇ. 50ರಷ್ಟು ಹುದ್ದೆ ಖಾಲಿ ಇವೆ. ಇದರಿಂದ ಬೆಳೆ ಸಮೀಕ್ಷೆ, ರೈತರಿಗೆ ಯೋಜನೆಗಳ ಮಾಹಿತಿ ಸೇರಿ ಬಹಳಷ್ಟು ಕೆಲಸಗಳು ಆಗುತ್ತಿಲ್ಲ. ಈಗಿರುವ ಅನುವುಗಾರರ ಪುನರ್ ನೇಮಕವೂ ಸೇರಿ ಇಲಾಖೆಯ ಖಾಲಿ ಹುದ್ದೆ ಭರ್ತಿಗೆ ಬಜೆಟ್ ನಂತರ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆ ಕೃಷಿ ವಿವಿಗಳಿಂದ ಡಿಪ್ಲೋಮಾ ಪಡೆದವರು ಕೆಲಸ ಇಲ್ಲ ಎಂದು ನಿರಾಶರಾಗುವುದು ಬೇಡ. ಶೀಘ್ರ ಸಿಹಿ ಸುದ್ದಿ ಸಿಗಲಿದೆ ಎಂದು ಹೇಳಿದರು. ಕಡಲೆ ಖರೀದಿ 20 ಕ್ವಿಂಟಾಲ್ಗೆ ಹೆಚ್ಚಿಸುವುದು ಹಾಗೂ ಗೋವಿನಜೋಳ ಬೆಳೆಗಾರರ ಹಿತ ಕಾಯುವ ಕುರಿತು ಸಿಎಂ ಜೊತೆ ರ್ಚಚಿಸಲಾಗುವುದು. ಕೃಷಿ ಭಾಗ್ಯ (ಕೃಷಿ ಹೊಂಡ) ಯೋಜನೆ ನಿಲ್ಲಿಸುವುದಿಲ್ಲ. ಬೆಳೆ ದರ್ಶಕ ಆಪ್ನಲ್ಲಿ ತಪ್ಪಾಗಿ ನಮೂದು, ಕಡಲೆ ಖರೀದಿ ಸಂದರ್ಭದಲ್ಲಿ ಮಿಸ್ವ್ಯಾಚ್ ಇತ್ಯಾದಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಬೆಂಬಲ ಬೆಲೆ ಅಡಿ ಖರೀದಿಸುವ ಬದಲು ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡಿದ ರೈತರಿಗೆ ವ್ಯತ್ಯಾಸದ ಹಣ ನೀಡುವ ಬಗ್ಗೆಯೂ ಗಂಭೀರ ಚರ್ಚೆ ನಡೆಸಲಾಗುವುದು ಎಂದು ಉತ್ತರಿಸಿದರು.
ಸಿಬಿಲ್ ಕೇಳಬೇಡಿ: ರೈತರಿಗೆ ಸಾಲ ಕೊಡುವ ಮುನ್ನ ಕೆಲ ಬ್ಯಾಂಕ್ಗಳು ಸಿಬಿಲ್ ಕೇಳುತ್ತಿವೆ ಎಂದು ಗೊತ್ತಾದ ಕೂಡಲೇ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಾನೆಲ್ಲೂ ರೈತರನ್ನು ಸಿಬಿಲ್ ಕೇಳುವವರನ್ನು ನೋಡಿಲ್ಲ. ಇದು ಬದಲಾಗಬೇಕು ಎಂದು ಕಡಕ್ ಎಚ್ಚರಿಕೆ ನೀಡಿದರು. ಈ ಬಗ್ಗೆ ಬೆಂಗಳೂರಲ್ಲಿ ಇನ್ನೊಂದು ವಾರದಲ್ಲಿ ರಾಜ್ಯ ಮಟ್ಟದ ಲೀಡ್ ಬ್ಯಾಂಕ್ ಸಭೆ ನಡೆಸಲಾಗುವುದು ಎಂದರು.
ಸಾಲಮನ್ನಾ ಅರ್ಥ ಆಗಿಲ್ಲ: ಎಚ್.ಡಿ. ಕುಮಾರಸ್ವಾಮಿ ಅವರ ಸಾಲಮನ್ನಾ ಯಾರಿಗೂ ಅರ್ಥ ಆಗಿಲ್ಲ. ಸ್ಪಷ್ಟ ಆದೇಶ ಬಂದಿರಲಿಲ್ಲ. ಹಾಗಾಗಿ ಬಹಳಷ್ಟು ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಒಟ್ಟಾರೆ ರೈತರಿಗೆ ಅನ್ಯಾಯ ಆಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಟೀಲ್ ತಿಳಿಸಿದರು.
ಮಗಳ ಆಸಕ್ತಿ: ಕೃಷಿ ಸಚಿವ ಬಿ.ಸಿ. ಪಾಟೀಲರು ನಡೆಸಿದ ರೈತರೊಂದಿಗೆ ಸಂವಾದ ಸಭೆಯಲ್ಲಿ ಮಗಳು ಸೃಷ್ಟಿ ಕೂಡ ಆಸಕ್ತಿಯಿಂದ ಭಾಗವಹಿಸಿದ್ದು ಕಂಡು ಬಂತು.
ಕಪೆಕ್ ನಾನೇ ಕೇಳಿರಲಿಲ್ಲ: ಕರ್ನಾಟಕ ಅಗ್ರಿಕಲಚರ್ ಪ್ರೊಡ್ಯುಸ್ ಪ್ರೊಸೆಸ್ಸಿಂಗ್ ಆಂಡ್ ಎಕ್ಸಪೋರ್ಟ್ ಕಾಪೋರೇಶನ್ ಲಿಮಿಟೆಡ್ (ಕಪೆಕ್) ಬಗ್ಗೆ ಕೃಷಿ ಸಚಿವನಾದ ಮೇಲೆಯೇ ಗೊತ್ತಾಗಿದೆ. ಅಂದರೆ ಈ ಅಧಿಕಾರಿಗಳು ರೈತರಿಗೆ ಎಷ್ಟು ಹತ್ತಿರ ಇದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಸಚಿವರು ಪದೇಪದೆ ಪ್ರಸ್ತಾಪಿಸಿದರು. ಕರ್ನಾಟಕ ಆಯಿಲ್ಸೀಡ್ಸ್ ಫೆಡರೇಶನ್ (ಕೆಒಎಫ್)ನವರು ಸಫಲ್ ಎಣ್ಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ. ಅದು ಒಳ್ಳೆಯ ಬ್ರಾ್ಯಂಡ್ ಆಗಿದೆ. ಅದೇ ರೀತಿ ಕಪೆಕ್ನವರು ಸೇರಿಕೊಂಡು ರೈತರ ಬೆಳೆಗೆ ಉತ್ತಮ ಬೆಲೆ ನೀಡಬಹುದು. ಕಪೆಕ್ ಅಧಿಕಾರಿಗಳು ಸೂಚಿಸುವೆ ಎಂದರು.
ಸಭೆಗೆ ಬಾರದವರಿಗೆ ಎಚ್ಚರಿಕೆ: ಸಚಿವರ ಸಭೆಗೆ ಬರುವುದಿಲ್ಲ ಎಂದರೆ ಸಾಮಾನ್ಯ ಜನರು, ರೈತರಿಗೆ ಇವರು ಹೇಗೆ ಸಿಗುತ್ತಾರೆ ಎಂದು ಗರಂ ಆದ ಕೃಷಿ ಸಚಿವ ಪಾಟೀಲ್, ನಾಫೆಡ್ ಇತರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು. ರೈತರಿಗೆ ಸುಳ್ಳು ಆಶ್ವಾಸನೆ ಕೊಡಲಾರೆ, ಅನ್ನದಾತನ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ. ಅದಕ್ಕಾಗಿ ಎಲ್ಲ ಜಿಲ್ಲೆಗಳ ಕೃಷಿ ನಿರ್ದೇಶಕರ ಸಭೆ ನಡೆಸಿದ್ದೇನೆ. ಬಜೆಟ್ನಲ್ಲಿ ರೈತ ಪರ ಯೋಜನೆಗಳು ಇರಲಿವೆ. ಆನ್ಲೈನ್ ಮಾರ್ಕೆಟಿಂಗ್ಗೆ ಸರ್ಕಾರ ಬೆಂಬಲ ನೀಡಲಿದೆ ಎಂದರು. ಸಂವಾದದಲ್ಲಿ ಧಾರವಾಡ ಹಾಗೂ ಅಕ್ಕಪಕ್ಕ ಜಿಲ್ಲೆಯ ರೈತರು ಪಾಲ್ಗೊಂಡಿದ್ದರು. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿದರು.