ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕೆ. ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಚ್.ಡಿ.ಕೆ. ಆಕ್ರೋಶ
Published on

ಹಾಸನ: ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಅನುಮೊದನೆ ನೀಡುವ ಮೂಲಕ ಈ ದೇಶದ ಕಾನೂನು ವ್ಯವಸ್ಥೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟವನ್ನು ಉಪಮುಖ್ಯಮಂತ್ರಿಗಳ ಪಾದದಡಿಗೆ ದೂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ನಗರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಸಿಬಿಐ ತನಿಖೆಯಿಂದ ಹಿಂಪಡೆಯುವ ತರಾತುರಿ ನಿರ್ಧಾರ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಮೈನಿಂಗ್, ಗ್ರಾನೈಟ್ ಕೆಲಸ ಮಾಡಲು ಕಾನೂನು ಮೀರಿ ಮಾಡಿದ ಸಂಪತ್ತು ರಕ್ಷಿಸಲು, ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸುಪ್ರೀಂಕೋರ್ಟ್, ಹೈಕೋರ್ಟ್ನಲ್ಲಿ ಹಲವು ತೀರ್ಪು ಬಾಕಿ ಇವೆ, ಈ ನಡುವೆ ಕ್ಯಾಬಿನೆಟ್ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರ ಪ್ರಕರಣ ತನಿಖೆ ಮುಗಿಯುವ ಹಂತಕ್ಕೆ ಹೋಗಿದೆ. ಕೋರ್ಟ್ನಲ್ಲಿ ತಡೆಯಾಜ್ಞೆ ಕೇಳಲು ಹೋದಾಗ ಅನುಮತಿ ಸಿಕ್ಕಿಲ್ಲ. ನ.22ಕ್ಕೆ ವಿಚಾರಣೆ ಇತ್ತು. ಅದು 29ಕ್ಕೆ ಹೋಗಿದೆ. ಕೋರ್ಟ್ನಲ್ಲಿ ಕೇಸ್ ನಡೆಯುವಾಗ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇದೆಯಾ ಎಂದು ಪ್ರಶ್ನಿಸಿದ ಅವರು, ಇಂತಹ ಸಂದರ್ಭದಲ್ಲಿ ತರಾತುರಿ ನಿರ್ಧಾರ ಎಷ್ಟು ಸರಿ? ಸಿಬಿಐನವರು ತನಿಖೆ ಮಾಡುತ್ತಿದ್ದಾರೆ. ಅವರು ನ್ಯಾಯಾಲಯಕ್ಕೆ ಹೋಗುವುದಾಗಿ ಹೇಳಿದ್ದಾರೆ. ತಪ್ಪಾಗಿರುವುದನ್ನು ಜನರ ಮುಂದೆ ಇಡುವುದು ನನ್ನ ಜವಾಬ್ದಾರಿ ಅದನ್ನು ನಿಭಾಯಿಸುತ್ತೇನೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ವಕೀಲ ವೃತ್ತಿ ಮಾಡುವವರಿಗೆ ಉಪನ್ಯಾಸ ಮಾಡಿದವರು. ಅವರ ಸಂಪುಟದಲ್ಲಿ ಇಂತಹ ತೀರ್ಮಾನ ಆಗಬಾರದಿತ್ತು. ಅವರು ಬಹಳ ಮೇಧಾವಿಗಳಿದ್ದಾರೆ. ಈ ತೀರ್ಮಾನ, ಎಷ್ಟರಮಟ್ಟಿಗೆ ಅವರು ಕಾನೂನು ರಕ್ಷಕರು ಎಂದು ಗೊತ್ತಾಗುತ್ತದೆ.
ಕಾಂಗ್ರೆಸ್ ಸರ್ಕಾರಕ್ಕೆ ಕನಿಷ್ಠ ತಿಳುವಳಿಕೆ ಇದ್ದಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಸಂವಿಧಾನದ ವ್ಯವಸ್ಥೆ ಉಳಿಯಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಿ ಎಂದು ವಿಧಾನಸಭೆ ಚುನಾವಣಾ ವೇಳೆ ಹೇಳಿ ಅಧಿಕಾರಕ್ಕೆ ಬಂದ ನಂತರ ಅವರ ತೀರ್ಮಾನ ಅವರು ಸಂವಿಧಾನ ಎಷ್ಟರ ಮಟ್ಟಿಗೆ ಉಳಿಸುತ್ತಾರೆ ಎನ್ನೋದನ್ನ ತೋರಿಸಿದೆ. ಇವರೆಲ್ಲ ಸಂವಿಧಾನ ಉಳಿಸುವರೇ ಎಂದು ಪ್ರಶ್ನಿಸಿದ ಅವರು, ಈ ದೇಶದ ಕಾನೂನಿನ ಬಗ್ಗೆ ಇವರಿಗೆ ಎಷ್ಟು ಗೌರವ ಇದೆ ಎಂದು ಜನರಿಗೆ ಈಗ ಗೊತ್ತಾಗಿದೆ ಎಂದು ಹೇಳಿದರು.
ಸಿ.ಬಿ.ಐ ವಿಚಾರಣೆ ಪೂರ್ಣಗೊಂಡರೆ ಕಾನೂನಿನ ಸಮಸ್ಯೆಯಾಗುತ್ತದೆ ಎಂದು ಈ ನಡೆ ಅನುಸರಿಸಲಾಗಿದೆ. ಎಂತಹ ಪ್ರಕರಣ ಬಂದರೂ, ಯಾರನ್ನು ಬೇಕಾದರೂ ಕೊಂಡುಕೊಳ್ಳುತ್ತೇವೆ ಎನ್ನುವ ಮನಸ್ಥಿಯಲ್ಲಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ಮಾಡಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ. ಕನಕಪುರ ಜನ 1.25 ಲಕ್ಷ ಅಂತರದಲ್ಲಿ ಗೆಲ್ಲಿಸಿದ್ದಾರೆ ಎನ್ನುತ್ತಾರೆ. ಪಾಪ ಅವರೆಲ್ಲಾ ಬಡತನದಲ್ಲೇ ಇದ್ದಾರೆ. ಇನ್ನೂ ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದ ಸ್ಥಿತಿ ಇದೆ. ಅವರಿಗೂ ಈ ರೀತಿ 1400 ಕೋಟಿರೂ. ಸಂಪಾದನೆ ಎರಡು ಮೂರು ವರ್ಷದಲ್ಲಿ ಹೇಗೆ ಮಾಡೋದು. ಎರಡೇ ವರ್ಷದಲ್ಲಿ ಅದಾಯ ಶೇ.30, ಶೇ.40, ಶೇ.200, ಶೇ.300 ಈ ಪ್ರತಿಭೆಯನ್ನು ಬಡವರಿಗೂ ಹೇಳಿಕೊಡಲಿ. ಆಗ ಬಡವರೂ ಪುಣ್ಯವಂತರಾಗುತ್ತಾರೆ ಎಂದು ವ್ಯಂಗ್ಯವಾಡಿದರು.
ಹಿಂದಿನ ಸರ್ಕಾರಕ್ಕೆ ತನಿಖಾ ಸಂಸ್ಥೆಗಳು ತನಿಖೆ ಮುಂದುವರೆಸಲು ಅನುಮತಿ ಕೋರಿದ್ದವು, ಅದಕ್ಕೆ ಆಗಿನ ಸರ್ಕಾರ ಅನುಮತಿ ಕೊಟ್ಟಿತ್ತು. ಇಂದಿನ ಉಪಮುಖ್ಯಮಂತ್ರಿ ಆಗ ಶಾಸಕರಾಗಿದ್ದರು. ಅವರು ರಾಜ್ಯದ ಜನರ ಪರವಾಗಿ ಕೆಲಸ ಮಾಡುವ ಬದಲು ವೈಯಕ್ತಿಕ ಈಡೇರಿಕೆಗೆ ಹೆಚ್ಚು ಉಪಯೋಗ ಮಾಡಿದ್ದಾರೆ. ಈ ದೇಶದ ವ್ಯವಸ್ಥೆಯಲ್ಲಿ ಏನೇ ಒಂದು ತಿರುಚಿದರೂ, ಅಂತಿಮವಾಗಿ ತೀರ್ಪು ನೀಡುವವನು ಭಗವಂತ. ಅವರು ಏನು ತೀರ್ಪು ಕೊಡುತ್ತಾನೋ ನೋಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net