

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಪುನರ್ ಜನ್ಮ ನೀಡಿದ ಜನರ ಋಣ ತೀರಿಸುವ ಕಾರ್ಯ ಅವರು ಮಾಡಬೇಕಿತ್ತು. ಆದರೆ, ದಾರಿ ತಪ್ಪಿಸುವ, ಮೋಸ ಮಾಡುವ ಕೆಲಸ ಮುಖ್ಯಮಂತ್ರಿ ಮಾಡಿದ್ದಾರೆ ಎಂದು ಹೇಳಿದರು.
ಯುಕೆಪಿ ಮೂರನೇ ಹಂತದ ಅನುಷ್ಠಾನ ಸಂಬಂಧ ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ ಮೊದಲು ಆಗಬೇಕು. ನಮ್ಮ ಪಾಲಿನ 130 ಟಿಎಂಸಿ ಅಡಿ ನೀರು ಸದುಪಯೋಗಕ್ಕೆ ಯೋಜನೆ ರೂಪಿಸಬೇಕಿದೆ. ಯುಕೆಪಿ ಮೂರನೇ ಹಂತಕ್ಕೆ ಈ ವರ್ಷ 10 ಸಾವಿರ ಕೋಟಿ ರೂ. ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
2023ರ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಮುಂದಿನ ಐದು ವರ್ಷದಲ್ಲಿ 2 ಲಕ್ಷ ಕೋಟಿ ರೂ. ಅನುದಾನವನ್ನು ರಾಜ್ಯದ ನೀರಾವರಿಗೆ ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಒಂದು ಪೈಸೆ ಮೀಸಲಿಟ್ಟಿಲ್ಲ. ಬಜೆಟ್‌ನಲ್ಲಿ ನೀರಾವರಿಗೆ 5 ಸಾವಿರ ಕೋಟಿ ರೂ. ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಕೊನೆಯ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ 21 ಸಾವಿರ ಕೋಟಿ ರೂ. ಅನುದಾನ ಬಳಕೆಯ ಬಗ್ಗೆಯೂ ಬಜೆಟ್‌ನಲ್ಲಿ ಅನುಮತಿ ನೀಡಿಲ್ಲ ಎಂದು ದೂರಿದರು.
ಯುಕೆಪಿ ಮೂರನೇ ಹಂತದ ಅನುಷ್ಠಾನ ಸಂಬಂಧ ಬಿಜೆಪಿ ಸರ್ಕಾರದ ಅವಧಿಯಲ್ಲಿ 53 ಸಾವಿರ ಎಕರೆ ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಮಾಡಲಾಗಿತ್ತು. ಆದರೆ, ಹಾಲಿ ಕಾಂಗ್ರೆಸ್ ಸರ್ಕಾರ ಇತ್ತ ಗಮನ ಹರಿಸಿಲ್ಲ ಎಂದು ಹೇಳಿದರು.
ರಾಜ್ಯದ ನೀರಾವರಿ ಯೋಜನೆಗಳ ಅಡೆತಡೆ ನಿವಾರಣೆ ಸಂಬಂಧ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಪ್ರಧಾನಿ ಬಳಿಗೆ ನಿಯೋಗ ಹೋಗುವುದರಿಂದ ಸದ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಕಾರಣ ಕೋರ್ಟ್‌ನಲ್ಲಿ ಪ್ರಕರಣಗಳು ಇರುವುದರಿಂದ ಪ್ರಧಾನಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ರಾಷ್ಟ್ರಿಯ ಯೋಜನೆ ಎಂದು ಘೋಷಿಸಿ, ಕಳೆದ ಬಜೆಟ್‌ನಲ್ಲಿ 5300 ಕೋಟಿ ರೂ. ಮಂಜೂರು ಮಾಡಿದೆ. ಅದನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನಿಸಿಲ್ಲ ಎಂದು ಆರೋಪಿಸಿದರು.
ಯುಕೆಪಿ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿರುವ ಪ್ರಕರಣ ತೆರವಾಗಿ, ಗೆಜೆಟ್ ನೋಟಿಫಿಕೇಶನ್ ಆದ ಬಳಿಕ ನಾನೇ ಹೋಗಿ ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿದರು.
ಖುಷಿಗೆ ಕಾವೇರಿ ತಮಿಳುನಾಡಿಗೆ : ಇಂಡಿಯಾ ರಾಜಕೀಯ ಒಕ್ಕೂಟವನ್ನು ಖುಷಿ ಪಡಿಸಲು ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಮೋಸದಾಟ ಬೇಡ, ಬಿಜೆಪಿ ಮೇಲೆ ಗೂಬೆ ಕೂರಿಸುವುದು ಬೇಡ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಆವರಿಸಿದೆ. ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಗೋಶಾಲೆ, ಕುಡಿಯುವ ನೀರು, ಮೇವು, ಜನರಿಗೆ ಉದ್ಯೋಗ ಒದಗಿಸಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಹೆಸರಲ್ಲಿ ಮೋಸ ನಡೆದಿದೆ. ಗ್ಯಾರಂಟಿ ಬೇಡ ಎನ್ನುವುದಿಲ್ಲ. ರಾಜ್ಯದ ಅಭಿವೃದ್ಧಿ ಕಡೆಗಣಿಸಬೇಡಿ ಎಂದು ಸಲಹೆ ನೀಡಿದರು.
11,144 ಕೋಟಿ ರೂ. ಎಸ್‌ಸಿ, ಎಸ್‌ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಸಿಕೊಳ್ಳುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯಗಳಿಗೆ ಮೋಸ ಮಾಡಿದೆ. ಎಸ್‌ಸಿ, ಎಸ್‌ಟಿ ಅನುದಾನವನ್ನು ಆ ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂದು ಆಗ್ರಹಿಸಿದರು.
ಆಕಾಂಕ್ಷಿಯಲ್ಲ: ಮುಂಬರುವ ಲೋಕಸಭಾ ಚುನಾವಣೆಗೆ ನಾನು ಆಕಾಂಕ್ಷಿಯಲ್ಲ. ವಿಜಯಪುರ, ಬಾಗಲಕೋಟೆಯಲ್ಲಿ ಹಾಲಿ ಸಂಸದರಿದ್ದಾರೆ. ಅಲ್ಲದೇ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೂ ನಾನು ಆಕಾಂಕ್ಷಿ ಅಲ್ಲ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ರಮೇಶ ಜಿಗಜಿಣಗಿ ಅವರಿಗೆ ಲೋಕಸಭಾ ಟಿಕೆಟ್ ಸಿಗುವುದು ಅನುಮಾನ ಎಂಬ ಸಚಿವ ಎಂ.ಬಿ.ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಂ.ಬಿ.ಪಾಟೀಲರು ನಮ್ಮ ಪಕ್ಷದ ವಕ್ತಾರ ಯಾವಾಗ ಆಗಿದ್ದಾರೆ? ಎಂದು ಪ್ರಶ್ನಿಸಿದರು.
ಒಂದು ದೇಶ, ಒಂದು ಚುನಾವಣೆ ವಿಷಯ ಇಂದು, ನಿನ್ನೆಯದಲ್ಲ. 1967 ರಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಷ್ಟ್ರದ ಹಿತದೃಷ್ಟಿಯಿಂದ ಹಾಗೂ ಖರ್ಚು, ವೆಚ್ಚ ತಗ್ಗಿಸಲು ಒಂದು ದೇಶ, ಒಂದು ಚುನಾವಣೆ ದೇಶಕ್ಕೆ ಅವಶ್ಯಕ ಎಂದರು.