

ಚಾಮರಾಜನಗರ: ರಾಜ್ಯ ಕಾಂಗ್ರೆಸ್ ಸರ್ಕಾರ ಮಹಿಳಾ ಮತ್ತು ಮಕ್ಕಳ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ವಿರುದ್ಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೊಳ್ಳೇಗಾಲದ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಆಡಳಿತ ವ್ಯವಸ್ಥೆ ಹಾಗೂ ಅವರು ೋಷಣೆ ಮಾಡಿದ್ದ ಗ್ಯಾರೆಂಟಿ ಯೋಜನೆಗಳು ಅಸ್ತವ್ಯಸ್ತವಾಗಿದೆ. ಯಾವುದನ್ನು ಸಮರ್ಪಕವಾಗಿ ಜಾರಿಗೊಳಿಸಲು ಆಗದಂತಹ ದುಸ್ಥಿತಿಗೆ ಸರ್ಕಾರ ಬಂದಿದೆ. ಚುನಾವಣೆ ಸಂದರ್ಭದಲ್ಲಿ ನೀಡುವ ಭರವಸೆಗಳನ್ನು ಈಡೇರಿಸಲು ಆಗುತ್ತದೆಯೇ ಎಂದು ಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳಿರುವುದೇ ಇದಕ್ಕೆ ನಿದರ್ಶನವಾಗಿದೆ. ಇದು ರಾಜ್ಯವನ್ನು ಅರಾಜಕತೆಗೆ ದೂಡುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ದೂರಿದರು.
ಬೆಳಗಾವಿ ಅಧವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಓರ್ವ ಹೆಣ್ಣು ಮಗಳನ್ನು ಬೆತ್ತಲೆಮಾಡಿ, ಕಂಬಕ್ಕೆ ಕಟ್ಟಿ ಹೊಡೆದಿರುವಂತಹ ಘಟನೆ ನಡೆದಿದೆ. ಇದು ಅತ್ಯಂತ ಖಂಡನೀಯವಾಗಿದೆ. ಅದಲ್ಲದೇ ಮಂಡ್ಯದಲ್ಲಿ ಸುಮಾರು 800-900 ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಕಠಿಣವಾದ ಕಾಯ್ದೆ ಇರುವ ಸಮಯದಲ್ಲಿ ಈ ಘಟನೆ ನಡೆದಿರುವುದು ರಾಜ್ಯದ ಆಡಳಿತದ ಹಳಿ ತಪ್ಪಿರುವುದಕ್ಕೆ ಉದಾಹರಣೆಯಾಗಿದೆ ಎಂದು ಕಿಡಿಕಾರಿದರು.
ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದರು, ಇದು ದೇಶಕ್ಕೆ ಮಾದರಿಯಾಯಿತು. ಪ್ರಧಾನಿ ನರೇಂದ್ರಮೋದಿ ಅವರು ಭೇಟಿ ಬಚಾವೋ ಬೇಟಿ ಪಡಾವೋ ಹಾಗೂ ಮಾತೃ ವಂದನಾ ಯೋಜನೆಗಳನ್ನು ಜಾರಿಗೆ ತಂದು ಹೆಣ್ಣು ಮಕ್ಕಳ ಸಕಾರಾತ್ಮಕ ಬೆಳವಣಿಗೆಗೆ ಕಾರಣರಾದರು. ಇಂತಹ ಸಂದರ್ಭದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆದಿರುವುದು ರಾಜ್ಯ ಸರ್ಕಾರದ ಅಸಹಾಯಕತೆಯನ್ನು ತೋರಿಸುತ್ತದೆ. ಕೋಲಾರದ ಮಾಲೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದ್ದು, ಸಮಾಜ ತಲೆತಗ್ಗಿಸುವಂತ ಘಟನೆಯಾಗಿದೆ. ಇದನ್ನು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇವೆಲ್ಲದರ ಹೊಣೆಯನ್ನು ಒತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಸ್.ಬಾಲರಾಜ್, ಸಿ.ಎಸ್.ನಿರಂಜನ್‌ಕುಮಾರ್, ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್, ಮುಖಂಡ ವೆಂಕಟೇಶ್, ನೂರೊಂದುಶೆಟ್ಟಿ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಮಂಗಲ ಶಿವಕುಮಾರ್, ವೆಂಕಟರಮಣಸ್ವಾಮಿ(ಪಾಪು), ಎಸ್ಸಿ ಮೋರ್ಚಾ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ಮುತ್ತಿಗೆ ಮೂರ್ತಿ, ನಗರಸಭಾ ಸದಸ್ಯೆ ಕುಮುದಾ ಕೇಶವಮೂರ್ತಿ, ಕುಲಗಾಣ ಶಾಂತಮೂರ್ತಿ, ನಟರಾಜ್ ಹಾಗೂ ಇತರರು ಭಾಗವಹಿಸಿದ್ದರು.