ಮುಖ್ಯಪರೀಕ್ಷೆ ಉತ್ತರ ಪತ್ರಿಕೆಗಾಗಿ ಅಲೆದಾಟ

KPSC
Published on

| ಮರಿದೇವ ಹೂಗಾರ ಹುಬ್ಬಳ್ಳಿ

ಕೆಪಿಎಸ್​ಸಿಯ 2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ನಕಲು ಪ್ರತಿ ಪಡೆಯಲು ಅಭ್ಯರ್ಥಿಗಳು ಹೆಣಗಾಡುತ್ತಿದ್ದಾರೆ. ಸಾಲದ್ದಕ್ಕೆ ಮುಖ್ಯಮಂತ್ರಿ ಕಚೇರಿ ಕದವನ್ನೂ ತಟ್ಟಿದ್ದಾರೆ. ಆದರೆ, ನಕಲು ಪ್ರತಿ ಮಾತ್ರ ಸಿಗದಾಗಿದೆ.

ಕರ್ನಾಟಕ ಲೋಕಸೇವಾ ಆಯೋಗವು 2015ನೇ ಸಾಲಿನ 428 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳಿಗೆ 2017 ಮೇ 12ರಂದು ಅರ್ಜಿ ಆಹ್ವಾನಿಸಿತ್ತು. ಅದೇ ವರ್ಷ ಆಗಸ್ಟ್​ನಲ್ಲಿ ಪೂರ್ವಭಾವಿ ಹಾಗೂ ಡಿಸೆಂಬರ್​ನಲ್ಲಿ ಮುಖ್ಯ ಪರೀಕ್ಷೆ ನಡೆಸಿತ್ತು. 2019ರಲ್ಲಿ ವ್ಯಕ್ತಿತ್ವ ಪರೀಕ್ಷೆ ನಡೆಸಿ, 2020ರ ಜ.10ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಆದರೆ, ಮುಖ್ಯ ಪರೀಕ್ಷೆಯ ಅಂಕಗಳನ್ನೇ ತಿದ್ದಿ ಅನರ್ಹರಿಗೆ ಹುದ್ದೆ ಭಾಗ್ಯ ನೀಡಲಾಗಿದೆ. ಇಲ್ಲವಾಗಿದ್ದರೆ ನಮಗೆ ಉತ್ತರ ಪತ್ರಿಕೆಗಳ ನಕಲು ಪ್ರತಿ ನೀಡಲಾಗುತ್ತಿತ್ತು ಎಂಬ ಆರೋಪ ನೊಂದ ಅಭ್ಯರ್ಥಿಗಳದ್ದು.

ನಕಲು ಪ್ರತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೆಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಗೌಪ್ಯ ಮಾಹಿತಿ ಕಾರಣ ನೀಡಿ ಕೆಪಿಎಸ್​ಸಿ ಅರ್ಜಿಗಳನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಕೆಲವರು ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದಾಗ, ಉತ್ತರ ಪತ್ರಿಕೆಗಳ ನಕಲು ಪ್ರತಿ ನೀಡುವಂತೆ ಕೆಪಿಎಸ್​ಸಿಗೆ ಆದೇಶಿಸಿತು. ಇದನ್ನು ಪ್ರಶ್ನಿಸಿ, ಕೆಪಿಎಸ್​ಸಿ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಸಿತು. ಅದೇ ಕೋರ್ಟ್ 2020ರ ಆ.26ರಂದು ಅಭ್ಯರ್ಥಿಗಳ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಪ್ರತಿಗಳನ್ನು ನಿಡುವಂತೆ ತೀರ್ಪು ನೀಡಿದೆ. ಇದೇ ತೀರ್ಪು ಇಟ್ಟುಕೊಂಡು ಕೆಪಿಎಸ್​ಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.

ಕೆಪಿಎಸ್​ಸಿ ಈ ಹಿಂದೆ ನಡೆಸಿದ್ದ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ನಕಲು ಪ್ರತಿಗಳನ್ನು ಅಭ್ಯರ್ಥಿಗಳಿಗೆ ನೀಡಿದೆ. ಆದರೀಗ ನಿರಾಕರಿಸುತ್ತಿರುವುದು ಅಭ್ಯರ್ಥಿಗಳಿಗೆ ಅನುಮಾನ ಮೂಡಿದೆ. ಡಿಜಿಟಿಲ್ ಮೌಲ್ಯಮಾಪನವನ್ನು ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸ್)ಗೆ ವಹಿಸಲಾಗಿತ್ತು. ಮೌಲ್ಯಮಾಪನ ನಂತರ ಆ ಅಂಕಗಳನ್ನು ಲಿನಕ್ಸ್ ಸರ್ವರ್ ಆಂಡ್ ಎಂವೈ-ಎಸ್​ಕ್ಯುಎಲ್ ಡಾಟಾಬೇಸ್​ನಲ್ಲಿ ಸಂರಕ್ಷಿಸಿಡಲಾಗಿತ್ತು. ಆದರೆ, ಕೆಪಿಎಸ್​ಸಿಯು ಫಲಿತಾಂಶವನ್ನು ಪ್ರಕಟಿಸುವ ಮುನ್ನವೇ ಟಿಸಿಎಸ್​ನೊಂದಿಗಿನ ಒಪ್ಪಂದ ಮುರಿದುಕೊಂಡು ಸಂಪೂರ್ಣ ಡಾಟಾವನ್ನು ತಿದ್ದಬಹುದಾದ ಎಡಿಬಲ್ ಎಕ್ಸೆಲ್ ಶೀಟ್​ಗೆ ವರ್ಗಾಯಿಸಿದೆ (ಕಂಟ್ರೋಲರ್ ಆಫ್ ಎಕ್ಸಾಮಿನೇಷನ್ ಅವರು ಹೈಕೋರ್ಟ್​ಗೆ ಸಲ್ಲಿಸಿದ ಅಫಿಡಾವಿಟ್ ಪ್ರಕಾರದ ಮಾಹಿತಿ) ಎಂಬ ಆರೋಪವನ್ನು ಅಭ್ಯರ್ಥಿಗಳು ಮಾಡಿದ್ದಾರೆ. ಇದರ ಸವಿಸ್ತಾರವಾದ ಮಾಹಿತಿಯನ್ನು ಮುಖ್ಯಮಂತ್ರಿಗೆ ಸುದೀರ್ಘವಾದ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಮಾಹಿತಿ ಹಕ್ಕು ಅಧಿನಿಯಮದಡಿ ಮುಖ್ಯಪರೀಕ್ಷೆಯ ಉತ್ತರ ಪತ್ರಿಕೆಗಳ ನಕಲು ಪ್ರತಿಗಳನ್ನು ನೀಡುವಂತೆ ಕೆಪಿಎಸ್​ಸಿಗೆ ಮನವಿ ಮಾಡಿ ಸಾಕಾಗಿದೆ. ಮಾಹಿತಿ ಹಕ್ಕು ಆಯೋಗ ದಂಡವನ್ನೂ ವಿಧಿಸಿದೆ. ಆದರೂ ಕೆಪಿಎಸ್​ಸಿ ಮೊಂಡುತನ ಪ್ರದರ್ಶಿಸುತ್ತಿದೆ. | ರಮೇಶ ತನಿಕೆದಾರ ಆಯ್ಕೆ ವಂಚಿತ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net